ಮಗನ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಮುಸ್ಲಿಂ ಕುಟುಂಬ

Prasthutha|

ಬೆಂಗಳೂರು : ಮುಸ್ಲಿಂ ಕುಟುಂಬವೊಂದು ತನ್ನ ಮಗನ ಸಾವಿನಲ್ಲೂ ಆರು ಜನರ ಬದುಕಿಗೆ ಬೆಳಕು ತಂದು ಸಾರ್ಥಕತೆ ಮೆರೆದಿದ್ದಾರೆ.

- Advertisement -


ಉತ್ತರ ಶಾಂಪುರ ಮುಖ್ಯರಸ್ತೆಯ ನಿವಾಸಿಯಾದ ಹಾಜಿ ಫಿರೋಜ್ ಖಾನ್ ಪುತ್ರನಾದ 22 ವರ್ಷದ ಫಾರ್ದಿನ್ ಖಾನ್ ಜೂನ್ 4 ರಂದು ಮದುವೆ ಸಮಾರಂಭ ಮುಗಿಸಿ ವಾಪಾಸ್ ಬರುತ್ತಿದ್ದಾಗ ತುಮಕೂರಿನ ಶಿರಾ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡರು.


ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಗಾಯಾಳು ಫಾರ್ಧಿನ್ ಖಾನ್ ನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಫಾರ್ದಿನ್ ಖಾನ್ ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರ ಬಳಿಯ ಸ್ಪರ್ಶ್ ಆಸ್ಪತ್ರೆಗೆ ಜೂನ್ 5 ರಂದು ದಾಖಲು ಮಾಡಲಾಯಿತು. ಸ್ಪರ್ಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಫಾರ್ದಿನ್ ಖಾನ್ ಗೆ ಚಿಕಿತ್ಸೆ ನೀಡಲಾಯಿತು.

- Advertisement -


ಆದರೆ ಕುಟುಂಬಸ್ಥರ ನಿರಂತರ ಪ್ರಾರ್ಥನೆ ಹಾಗೂ ನುರಿತ ವೈದ್ಯರ ಪರಿಶ್ರಮದ ನಡುವೆಯೂ ದುರ್ದೈವವಶಾತ್ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಜೂನ್ 7 ಬೆಳಗ್ಗೆ 11.55ಕ್ಕೆ ಫಾರ್ದಿನ್ ಖಾನ್ ‘ಮೆದುಳು ನಿಷ್ಕ್ರೀಯ’ಗೊಂಡಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದರು.
ಮೆದುಳು ನಿಷ್ಕ್ರೀಯಗೊಳ್ಳುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಕ್ಲಿನಕಲ್ ಡೆಡ್’ ಎಂದು ಹೇಳಲಾಗುತ್ತದೆ. ಅಂದರೆ, ವ್ಯಕ್ತಿಯ ಮೆದುಳು ಮಾತ್ರ ನಿಷ್ಕ್ರೀಯಗೊಂಡು ಉಳಿದೆಲ್ಲಾ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುವ ದೈಹಿಕ ಪ್ರಕ್ರಿಯೆಗೆ ಕ್ಲಿನಿಕಲ್ ಡೆಡ್ ಎನ್ನಲಾಗುತ್ತದೆ. ಹಾಗಾಗಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಬೇರೆಯವರಿಗೆ ನೀಡುವ ಮೂಲಕ ಅಂಗಾಂಗ ಕಸಿ ಮಾಡಬಹುದು.


ಮೂರು ದಿನಗಳ ಜೀವನ್ಮರಣದ ಹೋರಾಟದ ನಂತರ 22 ವರ್ಷದ ಫಾರ್ದಿನ್ ಖಾನ್ ಜೀವನ ಅಂತ್ಯವಾಯಿತು. ಈ ದುಃಖದ ಸನ್ನಿವೇಶದಲ್ಲಿ ಫಾರ್ದಿನ್ ಕುಟುಂಬದವರು ತಮ್ಮ ಮಗನ ದೇಹದ ಅಂಗಾಂಗಳನ್ನು ದಾನ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡರು. ತಮ್ಮ ಮಗನ ಅಂಗಾಂಗಳನ್ನು ದಾನ ಮಾಡಲು ಸಮ್ಮತ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಆರು ಜನರ ಬದುಕಿಗೆ ಮರುಜೀವ ನೀಡಿದ್ದಾರೆ.


ಫಾರ್ದಿನ್ ಖಾನ್ ಹೃದಯವನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದ 57 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಪಿತ್ತಜನಕಾಂಗವನ್ನು ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 42 ವರ್ಷದ ರೋಗಿಗೆ ಕಸಿ ಮಾಡಲಾಗಿದೆ. ಎಡ ಮೂತ್ರಪಿಂಡ ಮತ್ತು ಫ್ಯಾಂಕ್ರಿಯಾಸ್ ನ್ನು ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಬಹು ಅಂಗಾಂಗ ಕಸಿ ಮಾಡಲಾಗಿದೆ. ಬಲ ಮೂತ್ರಪಿಂಡವನ್ನು ಸ್ಪರ್ಶ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಿದರೆ, ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ.
ಮಗನ ದೇಹವನ್ನು ದಾನ ಮಾಡಿದ ಫಾರ್ದಿನ್ ಕುಟುಂಬದ ನಡೆಯ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಜೀವ ಉಳಿಸುವುದು, ಈ ಜಗತ್ತಿನ ಮಾನವೀಯತೆ ಉಳಿಸಿದಂತೆ ಎಂದರು.


ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ಅಂಗಾಂಗ ದಾನ ಮಾಡಿದ ಫಾರ್ದಿನ್ ಕುಟುಂಬದ ನಡೆ ಸಮಾಜಕ್ಕೆ ಆದರ್ಶ ಪ್ರಾಯ ಎಂದರು. ಇದೊಂದು ಉದ್ಧಾತ ಮಾನವೀಯ ನಡೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಫಾರ್ದಿನ್ ಕುಟುಂಬದ ನಿರ್ಧಾರ ಪ್ರೇರಕ ಶಕ್ತಿಯಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಆರು ಜನರ ಬದುಕಿಗೆ ಆಸರೆಯಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದ ಫಾರ್ದಿನ್ ಕುಟುಂಬದವರನ್ನು ಇಂದು ಖುದ್ದು ಭೇಟಿಯಾದ ಸಚಿವ ದಿನೇಶ್ ಗುಂಡೂರಾವ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಜೊತೆಗೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಫಾರ್ದಿನ್ ಕುಟುಂಬದವರ ನಿಲುವನ್ನು ಅಭಿನಂದಿಸಿದರು.



Join Whatsapp