ಮಂಗಳೂರು: ಕೋಮುದ್ವೇಷ, ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯುಟ್ ಹೌಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಆಗಮಿಸಿದ ಅವರು ‘ಜಿಲ್ಲೆ ಜನರ ನಾಡಿಮಿಡಿತ ಸ್ವಲ್ಪವಾದರೂ ನನಗೆ ಗೊತ್ತಿದೆ. ದಕ್ಷಿಣ ಕನ್ನಡ ಈ ರಾಜ್ಯದ ಅತ್ಯಂತ ಪ್ರತಿಷ್ಠಿತ ಜಿಲ್ಲೆ. ಆಗಾಗ ಬಂದು ಜನರ ಜೊತೆ ಸಂಪರ್ಕದಲ್ಲಿ ಇರುತ್ತೇನೆ, ಅಭಿವೃದ್ಧಿ, ಯೋಜನೆಗಳ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು. ಕಾನೂನು ಉಲ್ಲಂಘಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಗೆ ಜನ ಬರಬೇಕು, ಇಲ್ಲಿ ಬಂಡವಾಳ ಹೂಡಬೇಕು. ಇನ್ನು ಇಲ್ಲಿ ಅನೇಕ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಪಕ್ಷಪಾತ ಮಾಡದೇ ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪ್ರಚೋದನೆ, ಬೆಂಕಿ ಹಚ್ಚೋ ಕೆಲಸ ಸುಲಭ, ಅದನ್ನ ಆರಿಸೋದು ಕಷ್ಟ. ಹೀಗಾಗಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡಬೇಕು. ನಾನು ಯಾವುದೇ ಪಕ್ಷ, ಸಂಘಟನೆ ಅಂತ ಹೇಳಲ್ಲ, ಎಲ್ಲರೂ ಸರಿಯಿರಬೇಕು ಎಂದಿದ್ದಾರೆ.