ಬೆಂಗಳೂರು: ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೇರಲು ಚುನಾವಣಾಪೂರ್ವದಲ್ಲಿ ಘೋಷಿಸಿದ್ದ ಉಚಿತ ಗ್ಯಾರಂಟಿಗಳು ಬಹಳ ಮಹತ್ವದ್ದು ಎನ್ನಲಾಗಿವೆ. ಬಡ ಜನರ, ಮಧ್ಯಮವರ್ಗದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಗ್ಯಾರಂಟಿಗಳನ್ನು ಘೋಷಿಸಿದ್ದಾಗಿ ಕಾಂಗ್ರೆಸ್ ಹೇಳಿತ್ತು. ಇದೀಗ ಅವುಗಳ ಅನುಷ್ಠಾನ ಹಂತದಲ್ಲಿರುವಾಗಲೇ ನೂತನ ಸರ್ಕಾರದ ಕೃಷಿ ಸಚಿವ ಚೆಲುವರಾಯಸ್ವಾಮಿ ಸ್ಫೋಟಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಉಚಿತ ಭರವಸೆಗಳೆಲ್ಲ ಕೇವಲ ಚುನಾವಣಾ ಗಿಮಿಕ್ ಅಷ್ಟೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಇಂಥ ಗಿಮಿಕ್ಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
‘ಮೊದಲಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಬಗ್ಗೆ ದೇಶದಲ್ಲೆಲ್ಲ ಚರ್ಚೆಯಾಯಿತು. ನಾವು ಕೂಡ ಚರ್ಚೆ ಮಾಡಿದೆವು. ಇದು ಒಳ್ಳೆಯದಲ್ಲ ಎಂಬುದಾಗಿ. ಮುಂದೆ ಫ್ರೀ ಫ್ರೀ ಅಂತ ಹೋದರೆ ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಅಂತ. ಈಗ ನಾವುಗಳೂ ಅದೇ ಲೈನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್, ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಆವತ್ತಿಗೆ ರಿಸಲ್ಟ್ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಬಲ್ಲದ್ದು ಎಲ್ಲ ಮಾಡ್ತೀವಿ. ಬಟ್ ನಮ್ಮ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ, ಸಿದ್ದರಾಮಯ್ಯನವರ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ ಕೆಲವೊಂದನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಕೆಲವನ್ನು ಆ್ಯಕ್ಸೆಪ್ಟ್ ಮಾಡಬೇಕಾಗುತ್ತದೆ’ ಎಂದು ಚೆಲುವರಾಯಸ್ವಾಮಿ ಹೇಳಿರುವುದು ವಿಡಿಯೋದಲ್ಲಿದೆ.
ಸುರೇಂದ್ರ ತಾಪುರ ಎಂಬವರು ಸಚಿವರ ಹೇಳಿಕೆ ಇರುವ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದು, ’ಕರ್ನಾಟಕ ಕೃಷಿ ಸಚಿವ, ಕಾಂಗ್ರೆಸ್‌ನ ಚೆಲುವರಾಯಸ್ವಾಮಿ ಅವರು ಉಚಿತ ಭರವಸೆಯನ್ನು ಚುನಾವಣಾ ಗಿಮಿಕ್ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಬಿಟ್ಟಿಗಳಿಗಾಗಿ ಕಾಂಗ್ರೆಸಿಗೆ ಮತ ಹಾಕಿದ ಕರ್ನಾಟಕದ ಹಿಂದೂಗಳಿಗೆ ಈಗ ಖುಷಿಯಾಗುತ್ತಿರಬಹುದು. ಮತ್ತೊಂದೆಡೆ, ಕಾಂಗ್ರೆಸ್‌ಗೆ ಮತ ಹಾಕಿದ ರಾಜಸ್ಥಾನದ ರೈತರು ಸಂಭ್ರಮಿಸುತ್ತಾರೆ! ಯಾಕೆಂದರೆ, 19,000 ರೈತರ ಒಡೆತನದ ಭೂಮಿಯನ್ನು ಸಾಲ ಪಾವತಿಸದ ಕಾರಣಕ್ಕಾಗಿ ಬ್ಯಾಂಕ್‌ಗಳು ವಶಪಡಿಸಿಕೊಳ್ಳುತ್ತಿವೆ. ಹಿಂದೂಗಳು, ಈ ಭೂಮಿಯ ಮೇಲಿನ ಮೂರ್ಖರ ದೊಡ್ಡ ಗುಂಪೇ, ಏಕೆಂದರೆ ಅವರು ಅದನ್ನು ಮೀರಿ ಯೋಚಿಸುವುದಿಲ್ಲ’ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ, ಪ್ರತಿ ತಿಂಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ಯುವಕರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು 3,000 ರೂ. ಭತ್ಯೆ ಹಾಗೂ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿಗಳ ಘೋಷಣೆ ಮಾಡಿತ್ತು. ಇದೀಗ ಗ್ಯಾರಂಟಿಗಳ ಅನುಷ್ಠಾನದ ವೇಳೆ ಹಲವು ಷರತ್ತುಗಳನ್ನು ವಿಧಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.