ಬೆಂಗಳೂರು: ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ನ ಕಾನ್ಸುಲೇಟ್ ಜನರಲ್ ಎವೊಟ್ ಡಿ ವಿಟ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.
ನೆದರ್ಲ್ಯಾಂಡ್ ದೇಶವು ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು, ಒಟ್ಟಾರೆ ಹೂಡಿಕೆಯ ಶೇ. 9 ರಷ್ಟಿದೆ. ಸುಸ್ಥಿರ ಇಂಧನ, ಇಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮೊದಲಾದ ಉದ್ಯಮಗಳಲ್ಲಿ ವಿಶೇಷವಾಗಿ ನಾವೀನ್ಯತಾ ವಲಯದಲ್ಲಿ ನೆದರ್ಲ್ಯಾಂಡ್ ವಿಶೇಷ ಆಸಕ್ತಿ ಹೊಂದಿದೆ ಎಂದು ವಿವರಿಸಿದರು.
ಸೆಪ್ಟೆಂಬರ್ ನಲ್ಲಿ ನೆದರ್ ಲ್ಯಾಂಡಿನ ಪ್ರಧಾನಿ ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿಗೂ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮಿಗಳ ನಿಯೋಗವು ರಾಜ್ಯದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯ ಕುರಿತು ಚರ್ಚಿಸಲು ಉತ್ಸುಕವಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವು ಕೈಗಾರಿಕೋದ್ಯಮದಲ್ಲಿ ಮುಂಚೂಣಿಯ ರಾಜ್ಯವಾಗಿದೆ. ವಿಶೇಷವಾಗಿ ಐಟಿ, ಬಿಟಿ ವಲಯದಲ್ಲಿ ನಂ. 1 ಸ್ಥಾನದಲ್ಲಿದೆ. ಶಾಂತಿಯುತ ರಾಜ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲ ಲಭ್ಯವಿರುವುದರಿಂದ ಹೂಡಿಕೆಗೆ ಅತ್ಯುತ್ತಮ ತಾಣವಾಗಿದೆ. ರಾಜ್ಯದಲ್ಲಿ ನೆದರ್ಲ್ಯಾಂಡ್ ಕಂಪೆನಿಗಳ ನೆಲೆಯನ್ನು ಉತ್ತೇಜಿಸಲು ಎಲ್ಲ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಉಪಸ್ಥಿತರಿದ್ದರು.