ಕಲೆಯ ಮೂಲಕ ದ್ವೇಷ ಬಿತ್ತಲಾಗುತ್ತಿದೆ: ‘ದಿ ಕೇರಳ ಸ್ಟೋರಿ’ ವಿರುದ್ಧ ನಟ ನಾಸಿರುದ್ದೀನ್‌ ಶಾ ವಾಗ್ದಾಳಿ

Prasthutha|

ಮುಂಬೈ: ಕಪೋಲ ಕಲ್ಪಿತ ಕಥೆಯನ್ನೊಳಗೊಂಡ ದಿ ಕೇರಳ ಸ್ಟೋರಿ  ಸಿನಿಮಾ ಬಿಡುಗಡೆಯಾದಾಗಿನಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಹಲವು ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ವಿರೋಧ ಹೊರಹಾಕಿದ್ದಾರೆ. ಇದೀಗ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಕೂಡ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸಿನಿಮಾದ ಬಗ್ಗೆ ಮಾತನಾಡಿರುವ ನಾಸಿರುದ್ದೀನ್‌ ಅವರು, “ಇತ್ತೀಚಿನ ದಿನಗಳಲ್ಲಿ ಕಲೆಯ ಮೂಲಕ ಜನಸಾಮಾನ್ಯರಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಇದು ಆತಂಕದ ವಿಚಾರವಾಗಿದೆ. ಆಡಳಿತದಲ್ಲಿರುವ ಸರ್ಕಾರವು ಜನರನ್ನು ಜಾಣತನದಿಂದ ಮರಳುಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 “ಪ್ರಸ್ತುತ ಚಲನಚಿತ್ರಗಳಲ್ಲಿನ ಮನಸ್ಥಿತಿಯು ವಾಸ್ತವದಲ್ಲಿ ಏನಾಯಿತು ಎಂಬುದರ ಪ್ರತಿಬಿಂಬವಾಗಿದೆ. ಇದು ನಿಜಕ್ಕೂ ಚಿಂತಾಜನಕ ವಿಚಾರ. ಮುಸ್ಲಿಂ ಬಗ್ಗೆ ದ್ವೇಷ ಹುಟ್ಟಿಸಿಕೊಳ್ಳುವುದೇ ಈಗಿನ ಫ್ಯಾಶನ್‌ ಆಗಿಬಿಟ್ಟಿದೆ. ವಿದ್ಯಾವಂತರೂ ಸಹ ಇದರಿಂದ ಹೊರತಾಗಿಲ್ಲ. ಆಡಳಿತದಲ್ಲಿರುವ ಸರ್ಕಾರ ಜಾಣ್ಮೆಯಿಂದ ಈ ಕೆಲಸ ಮಾಡುತ್ತಿದೆ. ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ, ಜಾತ್ಯಾತೀತತೆ ಬಗ್ಗೆ ಮಾತನಾಡುತ್ತೇವೆ. ಹಾಗಿದ್ದ ಮೇಲೆ ಎಲ್ಲ ವಿಚಾರದಲ್ಲಿ ಧರ್ಮವನ್ನು ಪರಿಚಯಿಸುವ ಅಗತ್ಯವೇನಿದೆ?” ಎಂದು ಕೇಳಿದರು.

- Advertisement -

ಚುನಾವಣಾ ಆಯೋಗದ ಬಗ್ಗೆಯೂ ಮಾತನಾಡಿದ ಅವರು, “ಮತ ಗಿಟ್ಟಿಸಿಕೊಳ್ಳಲು ರಾಜಕಾರಣಿಗಳು ಧರ್ಮವನ್ನು ಬಳಸುತ್ತಿದ್ದರೂ ಚುನಾವಣಾ ಆಯೋಗ ಮಾತ್ರ ಮೂಕಪ್ರೇಕ್ಷಕನಾಗಿದೆ. ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಒಂದು ವೇಳೆ ಯಾರಾದರೂ ʼಅಲ್ಲಾ ಹು ಅಕ್ಬರ್‌ ಹೇಳಿ ಮತ ಹಾಕಿʼ ಎಂದು ಹೇಳಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿ” ಎಂದು ಹೇಳಿದ್ದಾರೆ.

ಹಾಗೆಯೇ, “ಈ ಧರ್ಮಗಳ ಆಟ ಹೆಚ್ಚು ದಿನ ನಡೆಯುವುದಿಲ್ಲ. ಒಂದಲ್ಲ ಒಂದು ದಿನ ಸವೆಯಲೇ ಬೇಕು. ಈಗ ಸದ್ಯ ಅದು ಉತ್ತುಂಗದಲ್ಲಿದೆ. ಸರ್ಕಾರ ಅತ್ಯುತ್ತಮವಾಗಿ ಧರ್ಮದ ಕಾರ್ಡ್‌ ಬಳಸಿಕೊಂಡಿದೆ. ಅದು ಕೆಲಸ ಮಾಡಿದೆ ಕೂಡ. ಆದರೆ ಇನ್ನೂ ಎಷ್ಟು ದಿನ ಇದೇ ರೀತಿಯಲ್ಲಿ ಧರ್ಮದ ಕಾರ್ಡ್‌ನಿಂದ ಆಟವಾಡಲಾಗುತ್ತದೆ ನೋಡೋಣ” ಎಂದು ನಾಸಿರುದ್ದೀನ್‌ ಶಾ ಹೇಳಿದರು.



Join Whatsapp