ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿತ್ತು. ಸದ್ಯ FIR ರದ್ದು ಕೋರಿ ಹೈಕೋರ್ಟ್ಗೆ ಶಾಸಕ ಅಶ್ವತ್ಥ್ ನಾರಾಯಣ ಅರ್ಜಿ ಸಲ್ಲಿಸಿದ್ದಾರೆ.
ಕಪೋಲ ಕಲ್ಪಿತ ಆರೋಪ ಮಾಡಿ ದೂರು ನೀಡಲಾಗಿದೆ. ಸಿದ್ದರಾಮಯ್ಯರನ್ನು ಸೋಲಿಸಬೇಕೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ. ಆದರೆ ದುರುದ್ದೇಶದಿಂದ ತಮ್ಮ ವಿರುದ್ಧ ಎಫ್ಐಆರ್ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿ ತಿಂಗಳಲ್ಲಿ ಮಂಡ್ಯದ ಸಾತನೂರಿನಲ್ಲಿ ಸಿದ್ದರಾಮಯ್ಯ ಕೊಲೆಗೆ ಪ್ರಚೋದಿಸುವ ಹೇಳಿಕೆ ನೀಡಿದ್ದಾಗಿ ಆರೋಪಿಸಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ನೀಡಿದ್ದ ದೂರಿನ ಆಧಾರದಲ್ಲಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲಿಸಲಾಗಿತ್ತು. ಬಳಿಕ ಪ್ರಕರಣವನ್ನು ಮಂಡ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಅಶ್ವತ್ಥ ನಾರಾಯಣ ಅವರು ಮಂಡ್ಯದ ಸಾತನೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಟಿಪ್ಪು ಮುಗಿಸಿದಂತೆ ಅವರನ್ನೂ ಮುಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತಿದ್ದ ಅವರು ಕ್ಷಮಾಪಣೆ ಕೇಳಿದ್ದರು. ಅದಾಗ್ಯೂ, ಅಶ್ವತ್ಥನಾರಾಯಣ ವಿರುದ್ಧ ಫೆಬ್ರವರಿ 17ರಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಕ್ರಮ ಕೈಗೊಂಡಿರಲಿಲ್ಲ.
ಕಾಂಗ್ರೆಸ್ ಸರ್ಕಾರ ಬಂದ ನಂತರ ಮಂಡ್ಯ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ಅಜಯ್ ಕುಮಾರ್ ಅವರು ಠಾಣೆಗೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ವೇಳೆ, ಹಿಂದೆ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ, ಮತ್ತೆ ದೂರು ನೀಡುವಂತೆ ಇನ್ಸ್ಪೆಕ್ಟರ್ ಅವರು ನೀಡಿದ ಸೂಚನೆ ಮೇರೆಗೆ ಲಕ್ಷ್ಮಣ ಅವರು ದೂರು ದಾಖಲಿಸಿದ್ದರು.