►ಮತೀಯ ಕೊಲೆಗಳಿಗೆ ಸಮಾನ ನ್ಯಾಯ ಒದಗಿಸಲು ದ.ಕ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಮನವಿ
ಮಂಗಳೂರು: ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಮತ್ತು ರಾಜಕೀಯ ಕಾರಣಕ್ಕೆ ನಡೆದ ಕೊಲೆ ಪ್ರಕರಣಗಳಿಗೆ ಸಮಾನ ನ್ಯಾಯ ಒದಗಿಸಿಕೊಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ನಗರದ ಸರ್ಕಿಟ್ ಹೌಸ್’ನಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿಯಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ನೇತೃತ್ವದ ನಿಯೋಗ, ವಿಧಾನಸಭಾಧ್ಯಕ್ಷರ ಮೂಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮಂಗಳಪೇಟೆಯ ಫಾಝಿಲ್ ಕೊಲೆ ಪ್ರಕರಣದಲ್ಲಿ ಸಂಘಪರಿವಾರದ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಿ ಯುಎಪಿಎ ಅಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೆ.ಕೆ ಶಾಹುಲ್ ಹಮೀದ್ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಧರ್ಮಾಧಾರಿತ ಮತ್ತು ರಾಜಕೀಯ ದ್ವೇಷದ ಕೊಲೆ ಪ್ರಕರಣಗಳಲ್ಲಿ ಕಣ್ಣಿಗೆ ಕಾಣುವ ರೀತಿ ತಾರತಮ್ಯ ನಡೆದಿದೆ. ಪರಿಹಾರ ಮತ್ತು ತನಿಖೆಯಲ್ಲಿ ಅನ್ಯಾಯ ಆಗಿದೆ. ಪ್ರವೀಣ್ ನೆಟ್ಟಾರು ಹತ್ಯೆಗೂ ಮೊದಲು ಬೆಳ್ಳಾರೆಯಲ್ಲಿ ಮಸೂದ್ ಎಂಬ ಬಡಪಾಯಿ ಮುಸ್ಲಿಂ ಯುವಕನ ಹತ್ಯೆ ಆಗಿತ್ತು. ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ನಲ್ಲಿ ಮಂಗಳಪೇಟೆಯ ಫಾಝಿಲ್ ಹತ್ಯೆ ಆಗಿದೆ. ಬಳಿಕ ಕಾಟಿಪಳ್ಳದಲ್ಲಿ ಜಲೀಲ್ ಎಂಬವರ ಕೊಲೆಯಾಗಿದೆ. ಇದಕ್ಕೂ ಮೊದಲು ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ಅವರ ಹತ್ಯೆಯಾಗಿತ್ತು. ಈ ಐದು ಕೊಲೆ ಪ್ರಕರಣಗಳ ಪೈಕಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ, ಎನ್ಐಎ ತನಿಖೆಗೆ ವಹಿಸಿ, ಯುಎಪಿಎ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಮೂವರು ಮುಸ್ಲಿಮರು ಮತ್ತು ಓರ್ವ ದಲಿತನ ಕೊಲೆ ಪ್ರಕರಣವನ್ನು ಕಡೆಗಣಿಸಲಾಗಿದೆ. ಫಾಝಿಲ್ ಕೊಲೆ ಪ್ರಕರಣದ ಆರೋಪಿಯೊಬ್ಬ ಒಂದೇ ತಿಂಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ. ದಿನೇಶ್ ಕನ್ಯಾಡಿ ಹತ್ಯೆ ಆರೋಪಿ ಕೂಡ ಬೇಗನೇ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಸುರತ್ಕಲ್ನಲ್ಲಿ ಫಾಝಿಲ್ ಅವರನ್ನು ನಮ್ಮವರೇ ಕೊಲೆ ಮಾಡಿದ್ದು ಎಂದು ಸಂಘಪರಿವಾರದ ನಾಯಕ ಶರಣ್ ಪಂಪ್ವೆಲ್ ಅವರು ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿ ಹೇಳಿದರೂ ಅವರ ವಿರುದ್ಧವೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಶರಣ್ ಪಂಪ್ವೆಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಬಿಟ್ಟರೆ ಅವರ ವಿಚಾರಣೆ ನಡೆದಿಲ್ಲ, ಬಂಧನವೂ ಆಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಯ ಸಂದರ್ಭದಲ್ಲಿ ಫಾಝಿಲ್, ಮಸೂದ್ ಹತ್ಯೆಯನ್ನು ಪ್ರಸ್ತಾಪಿಸಿ ನ್ಯಾಯ ದೊರಕಿಸಿ ಕೊಡುವುದಾಗಿ ಕಾಂಗ್ರೆಸ್ ಪಕ್ಷ ಕೂಡ ಭರವಸೆ ನೀಡಿತ್ತು. ಇದೀಗ ರಾಜ್ಯದಲ್ಲಿ ನಮ್ಮ ಪಕ್ಷದ ಸರಕಾರ ರಚನೆಯಾಗಿದ್ದು, ನಾವು ಕೊಟ್ಟ ಭರವಸೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಅಧಿಕಾರ ಸಿಕ್ಕ ಬಳಿ ಕಾಂಗ್ರೆಸ್ ಪಕ್ಷ ಕೇವಲ ಪ್ರವೀಣ್ ನೆಟ್ಟಾರು ಕುಟುಂಬಕ್ಕಷ್ಟೇ ನ್ಯಾಯ ಒದಗಿಸಿ, ಕೊಲೆಯಾದ ಮುಸ್ಲಿಮರ ಕುಟುಂಬಗಳನ್ನು ಮರೆತಂತಿದೆ ಎಂದು ಮುಸ್ಲಿಂ ಸಮುದಾಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಮುಸ್ಲಿಮರ ಈ ಆತಂಕವನ್ನು ದೂರಮಾಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಮತ್ತು ರಾಜಕೀಯ ಕಾರಣಕ್ಕೆ ನಡೆದ ಕೊಲೆ ಪ್ರಕರಣಗಳನ್ನು ಸರಕಾರ ಸಮಾನವಾಗಿ ಕಂಡು ನ್ಯಾಯ ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಸರಕಾರದ ಬಳಿ ಆಗ್ರಹಿಸಿದೆ.
ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಬೇಡಿಕೆಗಳು :
- ಬೆಳ್ಳಾರೆಯ ಮಸೂದ್, ಮಂಗಳಪೇಟೆಯ ಫಾಝಿಲ್, ಕಾಟಿಪಳ್ಳದ ಜಲೀಲ್ ಮತ್ತು ಕನ್ಯಾಡಿಯ ದಿನೇಶ್ ಕೊಲೆ ಪ್ರಕರಣವನ್ನು ಮರುತನಿಖೆ ಮಾಡಬೇಕು. ಆರೋಪಿಗಳ ವಿರುದ್ಧ ಯುಎಪಿಎ ಅಡಿ ಕ್ರಮ ತೆಗೆದುಕೊಳ್ಳಬೇಕು.
- ಮತೀಯ ಕಾರಣಕ್ಕೆ ನಡೆದ ಎಲ್ಲಾ ಕೊಲೆ ಪ್ರಕರಣಗಳನ್ನು ಮರುತನಿಖೆ ನಡೆಸಬೇಕು. ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಬೇಕು.
- ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಿದಂತೆ ಮಸೂದ್, ಫಾಝಿಲ್, ಜಲೀಲ್ ಮತ್ತು ದಿನೇಶ್ ಕುಟುಂಬಕ್ಕೂ ತಲಾ 25 ಲಕ್ಷ ರ. ಪರಿಹಾರ ನೀಡಬೇಕು
- ಪ್ರವೀಣ್ ನೆಟ್ಟಾರು ಪತ್ನಿಗೆ ಸರಕಾರ ಉದ್ಯೋಗ ಕಲ್ಪಿಸಿದಂತೆ ಮಸೂದ್, ಫಾಝಿಲ್, ಜಲೀಲ್ ಮತ್ತು ದಿನೇಶ್ ಕುಟುಂಬದ ಒಬ್ಬರಿಗೆ ಸರಕಾರದ ಕಡೆಯಿಂದ ಉದ್ಯೋಗ ನೀಡಬೇಕು
- ಫಾಝಿಲ್ ಕೊಲೆ ಪ್ರಕರಣದಲ್ಲಿ ಶರಣ್ ಪಂಪ್ವೆಲ್ ಅವರನ್ನು ಆರೋಪಿಯನ್ನಾಗಿಸಿ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿಯಾದ ನಿಯೋಗದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪಧಾದಿಕಾರಿಗಳು, ಬೆಳ್ಳಾರೆಯ ಮಸೂದ್ ತಾಯಿ, ಕಾಟಿಪಳ್ಳದ ಜಲೀಲ್ ಕುಟುಂಬಸ್ಥರು ಮತ್ತು ದಿನೇಶ್ ಕನ್ಯಾಡಿ ಅವರ ಪತ್ನಿ ಹಾಜರಿದ್ದರು.