ಲಖ್ನೋ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ(AIMPLB) ಹಿರಿಯ ವಕೀಲ ಮತ್ತು ಕಾರ್ಯದರ್ಶಿ ಜಫರ್ಯಾಬ್ ಜೀಲಾನಿ ಬುಧವಾರ ಲಖ್ನೋದ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 74 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದ ನಂತರ ಬೆಳಿಗ್ಗೆ 11.50 ರ ಸುಮಾರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಅಪ್ಪ ನಿಧನರಾದರು ಎಂದು ಜೀಲಾನಿ ಅವರ ಮಗ ನಜಮ್ ಜಫರ್ಯಾಬ್ ತಿಳಿಸಿದ್ದಾರೆ. ಜೀಲಾನಿ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬಾಬರಿ ಮಸೀದಿ ಪ್ರಕರಣದಲ್ಲಿ ವಕೀಲರಾಗಿದ್ದ ಜೀಲಾನಿ ಅವರು ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದರು. ಬುಧವಾರ ಸಂಜೆ ಲಖ್ನೋದ ಐಶ್ಬಾಗ್ ಕಬರಸ್ಥಾನದಲ್ಲಿ ತಂದೆಯ ಅಂತ್ಯಕ್ರಿಯೆ ನಡೆಯಲಿದೆ ಎಂದು ನಜಮ್ ಹೇಳಿದ್ದಾರೆ.
ಜಫರ್ಯಾಬ್ ಜೀಲಾನಿ ಅವರು ಬಾಬರಿ ಮಸೀದಿ ಪ್ರಕರಣದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ವಾದಿಸಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರೂ ಆಗಿದ್ದಾರೆ.