ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಅಂಕಿ ಅಂಶಗಳು ಲಭ್ಯವಾಗುತ್ತಿದ್ದು, ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿ ಬಹುಮತ ಪಡೆದಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ 125 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 67 ಕ್ಷೇತ್ರಗಳಲ್ಲಿ ಮುಂದಿದೆ. ಇನ್ನು ಜೆಡಿಎಸ್ 25ಸ್ಥಾನ ಹಾಗೂ ಇತರರು 07 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದಾರೆ.
ಚುನಾವಣೋತ್ತರದ ಹಲವು ಸಮೀಕ್ಷೆಗಳು ಕಾಂಗ್ರೆಸ್ ಗೆ ಬಹುಮತದ ಬಗ್ಗೆ ನೀಡಿದ ಸುಳಿವು ಈಗ ನಿಜವಾಗುತ್ತಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಮರುಕ್ಷಣದಿಂದಲೇ ತನ್ನ ಶಾಸಕರನ್ನು ರಕ್ಷಿಸಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್, ಪ್ರತಿ ಜಿಲ್ಲೆಗೆ ಮೂವರು ಉಸ್ತುವಾರಿಗಳನ್ನು ನೇಮಿಸಿದೆ. ಶಾಸಕರನ್ನು ಬೆಂಗಳೂರಿಗೆ ಕರೆತರುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಬಿಜೆಪಿಯು ‘ಆಪರೇಷನ್ ಕಮಲ’ ಕಾರ್ಯಾಚರಣೆಗೆ ಪ್ರಯತ್ನಿಸಬಹುದು ಎಂಬ ಅನುಮಾನದ ಮೇಲೆ ಶನಿವಾರವೇ ಎಲ್ಲ ಶಾಸಕರನ್ನೂ ಒಂದೆಡೆ ಸೇರಿಸಲು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ. ಮತ ಎಣಿಕೆ ಮುಗಿದು, ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದ ತಕ್ಷಣವೇ ಶಾಸಕರನ್ನು ಬೆಂಗಳೂರಿಗೆ ಕರೆತರುವಂತೆ ಉಸ್ತುವಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.