ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಬಗ್ಗೆ ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವು ಜೆಡಿಎಸ್ ಮೊರೆ ಹೋಗಲು ಯೋಜನೆ ರೂಪಿಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಮೈತ್ರಿಗೆ ನಾವು ಸಿದ್ಧ. ನಮ್ಮ ಷರತ್ತುಗಳನ್ನು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ಮತದಾನೋತ್ತರ ಬಿಡುಗಡೆಯಾದ 10 ಎಕ್ಸಿಟ್ ಪೋಲ್ಗಳಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಸಾಧಿಸುತ್ತೆ ಎಂದು ಭವಿಷ್ಯ ನುಡಿದಿದ್ದವು. ಮತ್ತೊಂದೆಡೆ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲೇ ಬಿಜೆಪಿ ಕಾದು ಕುಳಿತಿದೆ. ಹೀಗಾಗಿ ಜೆಡಿಎಸ್ ಪಕ್ಷದ ಸಹಾಯ ಪಡೆಯಲು ಒಳಗೊಳಗೆ ಕಸರತ್ತು ಶುರುವಾಗಿದೆ.
ಸಮ್ಮಿಶ್ರ ಸರ್ಕಾರಗಳ ಅಡಿಯಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದಾಗ, ಒಮ್ಮೆ ಬಿಜೆಪಿ (2006) ಮತ್ತು ನಂತರ ಕಾಂಗ್ರೆಸ್ (2018) ನೊಂದಿಗೆ ಕುಮಾರಸ್ವಾಮಿ ಅವರು ಎದುರಿಸಿದ ಬಿಕ್ಕಟ್ಟುಗಳಿಂದಾಗಿ ಅವರು ಈ ಬಾರಿ ನಿಟ್ಟ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಈ ಬಾರಿ ಮೈತ್ರಿಗೆ ಸಹಿ ಹಾಕುವ ಮೊದಲು ಅವರ ಕೆಲವು ಷರತ್ತುಗಳನ್ನು ಪೂರೈಸಲಾಗುತ್ತದೆಯೇ ಎಂದು ಖಚಿತಪಡಿಸಿಕೊಂಡ ನಂತರವೇ ಆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.