ನವದೆಹಲಿ: ಮ್ಯಾಟ್ರಿಮೋನಿಯಲ್
ವೆಬ್‌ಸೈಟ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯ ಮಾತಿಗೆ ಮರುಳಾದ ಬೆಂಗಳೂರು ಮೂಲದ ಮಹಿಳೆಯು ಲಕ್ಷಾಂತರ ನಗದು ಚಿನ್ನಾಭರಣಗಳನ್ನು ಕಳೆದುಕೊಂಡು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಏರ್ ಲೈನ್ ಉದ್ಯೋಗಿಯಾಗಿದ್ದ 39
ವರ್ಷ ವಯಸ್ಸಿನ ಬೆಂಗಳೂರಿನ ಮಹಿಳೆ, 15 ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಅನ್ಶುಲ್ ಜೈನ್ ನನ್ನು ಸಂಪರ್ಕಿಸಿದ್ದಾರೆ.
ಅನ್ಶುಲ್ ಜೈನ್ ತನ್ನನ್ನು ಎನ್‌ಸಿಆರ್ ಪ್ರದೇಶದಲ್ಲಿ ಉದ್ಯಮಿ ಎಂದು ಪರಿಚಯಿಸಿಕೊಂಡು ಆಕೆಯನ್ನು ದೆಹಲಿಗೆ ಬರುವಂತೆ ತಿಳಿಸಿದ್ದಾನೆ. ಜತೆಗೆ ತನ್ನ ಮನೆಯವರ ಜತೆಗೆ ಮದುವೆ ಮಾತುಕತೆ ನಡೆಸಲು ಬರುವಂತೆ ಹೇಳಿದ್ದಾನೆ. ಇದಕ್ಕೆ ಬರುವಾಗ ಉಡುಪುಗಳು ಮತ್ತು ಆಭರಣಗಳನ್ನು ತರುವಂತೆ ಅನ್ಶುಲ್ ಜೈನ್ ತನ್ನ ಬಳಿ ಹೇಳಿದ್ದಾನೆ ಎಂದು ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ದೆಹಲಿ ವಿಮಾನ ನಿಲ್ದಾಣದಲ್ಲಿ ಅನ್ಶುಲ್ ಜೈನ್ ನನ್ನನ್ನೂ ಬರಮಾಡಿಕೊಂಡು ಏರೋಸಿಟಿ ಫುಡ್ ಕೋರ್ಟ್‌ನಲ್ಲಿ ಊಟ ಮಾಡಿ ಅವರ ಕಾರಿನಲ್ಲಿ ಅಲ್ಲಿಂದ ತೆರಳಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು ಅರ್ಧ ಕಿಲೋಮೀಟರ್ ನಂತರ, ಅನ್ಶುಲ್ ಜೈನ್ ಕಾರಿನ ಟೈರ್‌ನಲ್ಲಿ ಏನೋ ಶಬ್ದ ಬರುತ್ತಿದೆ ಹೇಳಿದ್ದಾನೆ. ಟೈರ್ ಚೆಕ್ ಮಾಡಲು ಕೆಳಗೆ ಇಳಿದ ಕೂಡಲೇ ಅಲ್ಲಿಂದ ಅನ್ಶುಲ್ ಜೈನ್ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನ ಬಳಿಯಿದ್ದ 300 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ನಗದು, ಮೊಬೈಲ್ , ಮೂರು ಎಟಿಎಂ ಕಾರ್ಡ್‌ಗಳು ಹಾಗೂ ಬ್ಯಾಗ್ ಕಳವು ಮಾಡಲಾಗಿದೆ ಎಂದು ಹೇಳಿದ್ದಾಳೆ. ಮಹಿಳೆಯು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.