ಬೀದರ್: ಹಳ್ಳ ದಾಟಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲಾಗಿರುವ ದುರ್ಘಟನೆ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ನಡೆದಿದೆ.
ಹೆಡಗಾಪುರ ಗ್ರಾಮದ ಸುನಂದಾ ಸಂಗಪ್ಪಾ(42)ಅವರ ಮಗ ಸುಮಿತ್(12) ಹಾಗೂ ಮಗಳು ಐಶ್ವರ್ಯಾ ಲದ್ದೆ(14)
ಮೃತರು.
ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
ಹೊಲದಲ್ಲಿ ಕೆಲಸ ಮಾಡಿ ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಬೀದರ್ ಜಿಲ್ಲೆಯಲ್ಲಿ ಭಾರಿ ಬಿರುಗಾಳಿ ಜೊತೆ ಸುರಿದ ಅಕಾಲಿಕ ಮಳೆಯಿಂದ ಹೆಡಗಾಪುರ ಗ್ರಾಮದ ಹಳ್ಳ ಉಕ್ಕಿ ಹರಿದಿದೆ. ಆದರೂ, ಉಕ್ಕಿ ಹರಿಯುತ್ತಿದ್ದ ಹಳ್ಳವನ್ನೇ ಸಂಗಪ್ಪ ರೈತ ಕುಟುಂಬ ದಾಟಲು ಮುಂದಾಗಿದ್ದಾರೆ. ಮೃತ ಸುನಂದಾ ಪತಿ ಹಳ್ಳ ದಾಟಿದ್ದು, ಆದರೆ, ಪತ್ನಿ ಹಾಗೂ ಮಕ್ಕಳು ಸೇರಿ ಮೂವರು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಘಟನೆ ಸಂಬಂಧ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.