ಹೊಸದಿಲ್ಲಿ : ಕುಸ್ತಿಪಟುಗಳ ಪ್ರತಿಭಟನೆಯಿಂದ ದೇಶದ ಘನತೆ ಹಾಳಾಗುತ್ತಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (IOA) ವಿಚಿತ್ರ ಹೇಳಿಕೆ ನೀಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಪ್ರಾಪ್ತ ವಯಸ್ಕಳು ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಭಾರತದ ರೆಸ್ಲಿಂಗ್ ಫೆಡರೇಶನ್ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ಬೀದಿಗಿಳಿದಿದ್ದಾರೆ.
ಅಪ್ರಾಪ್ತ ವಯಸ್ಕಳು ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ಕುರಿತು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ಪೊಲೀಸರು ವಿಫಲವಾದ ನಂತರ ಜಂತರ್ ಮಂತರ್ಗೆ ಮರಳಬೇಕಾಯಿತು. ಶುಕ್ರವಾರ ಹೊಸದಿಲ್ಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಇನ್ನೂ ಎಫ್ಐಆರ್ ದಾಖಲಾಗಿಲ್ಲ ಎಂದು ಕುಸ್ತಿಪಟುಗಳು ಈ ವೇಳೆ ಆರೋಪಿಸಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ, ಕುಸ್ತಿಪಟುಗಳು ದೇಶದ ಗೌರವವನ್ನು ಹಾಳು ಮಾಡುತ್ತಿದ್ದು, ಅವರು ಬೀದಿಗಿಳಿದು ಪ್ರತಿಭಟಿಸುವುದು ಸರಿಯಲ್ಲ. ಕುಸ್ತಿಪಟುಗಳು ಕ್ರೀಡಾಪಟುಗಳ ಆಯೋಗಕ್ಕೆ ಬರಬೇಕಾಗಿತ್ತು ಎಂದು ಅಭಿಪ್ರಾಯ ಹೊರ ಹಾಕಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.