ಕರ್ನಾಟಕದ 16 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಘಪರಿವಾರದ ಮನಸ್ಥಿತಿ ಇಲ್ಲದ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ನೀಡುವ ತೀರ್ಮಾನ: ಅಪ್ಸರ್ ಕೊಡ್ಲಿಪೇಟೆ

Prasthutha|

ಹಾಸನ: ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಳೇನಹಳ್ಳಿಯಲ್ಲಿ ಎಸ್ ಡಿ ಪಿ ಐ ಗ್ರಾಮ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -


ಈ ಸಭೆಗೆ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಆಗಮಿಸಿ, ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಕೆಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಸ್ಪರ್ಧೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ.


ಈಗ ಜಿಲ್ಲೆಯ ಅರಸೀಕೆರೆ, ಸಕಲೇಶಪುರ, ಆಲೂರು, ಅರಕಲಗೂಡು, ಅರೇಹಳ್ಳಿ ಮತ್ತು ಹಾಸನ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಬಲಿಷ್ಠವಾಗಿದ್ದು, ಮುಂಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷವನ್ನು ಈಗಲೇ ಬೂತ್ ಮಟ್ಟದಲ್ಲಿ ಸಂಘಟಿಸಲು ಕಾರ್ಯಕರ್ತರು ತಯಾರಾಗಬೇಕು. ಈ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಎಸ್’ಡಿಪಿಐ ಪಕ್ಷದ ಬೆಂಬಲವನ್ನು ಕೇಳುತಿದ್ದು, ಪಕ್ಷವು ಇದುವರೆಗೆ ಯಾವುದೇ ನಿರ್ದಿಷ್ಟ ಅಭ್ಯರ್ಥಿಗಳನ್ನು ಅಥವಾ ನಿರ್ಧಿಷ್ಟವಾದ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ ಅಪ್ಸರ್ ಕೊಡ್ಲಿಪೇಟೆ, ಶೀಘ್ರವೇ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು ನಮ್ಮ ಬೆಂಬಲ ಯಾವ ಅಭ್ಯರ್ಥಿಗೆ ನೀಡಬೇಕು ಎಂದು ನಿರ್ಧಾರಕ್ಕೆ ಬರಲಾಗುವುದೆಂದು ತಿಳಿಸಿದರು.

- Advertisement -


ಕರ್ನಾಟಕದ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಎಸ್’ಡಿಪಿಐ ಸ್ಪರ್ಧೆ ಮಾಡುತ್ತಿದ್ದು ಉಳಿದ ಕಡೆ ಬಿಜೆಪಿ ಹೊರತುಪಡಿಸಿ ಹಾಗೂ ಉಳಿದ ಜಾತ್ಯತೀತ ಲೇಬಲ್’ನ ಪಕ್ಷದಲ್ಲಿರುವ ಸಂಘಪರಿವಾರದ ಮನಸ್ಥಿತಿ ಇಲ್ಲದ ಗೆಲ್ಲುವ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ನೀಡುವ ಬಗ್ಗೆ ಇನ್ನಷ್ಟೇ ತೀರ್ಮಾನಕ್ಕೆ ಬರಬೇಕಿದೆ ಎಂದು ಹೇಳಿದರು.
ಸೀಗೆ ಗ್ರಾಮ ಪಂಚಾಯಿತಿಯ ಗುಳೇನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು ಶೀಘ್ರವೇ ಕಾರ್ಯಕರ್ತರು ಮತ್ತು ಗ್ರಾಮಸ್ಥರನ್ನು ಸೇರಿಸಿ ಅವಲೋಕನ ಸಭೆಯನ್ನು ನಡೆಸಬೇಕು ಎಂದು ನಿರ್ದೇಶನ ನೀಡಿದರು. ಗ್ರಾಮ ಪಂಚಾಯತಿಯಿಂದ ಬರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಪಂಚಾಯಿತಿ ಸದಸ್ಯರಿಗೆ ಸಲಹೆ ನೀಡಿದರು. ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್, ಜಿಲ್ಲಾ ಸಮಿತಿ ಸದಸ್ಯ ಸೈಯದ್ ಶಫೀರ್, ಗ್ರಾಮವಸಮಿತಿ ಅಧ್ಯಕ್ಷರಾದ ಮುಬಾರಕ್ ಪಾಷಾ, ಅತೀಕ್ ಖಾನ್, ಸೈಯದ್ ಅಕ್ರಂ, ಮುಹಮ್ಮದ್ ಜಹೀರ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp