ಮಧ್ಯಂತರ ವರದಿಗೆ ವಿರುದ್ಧವಾಗಿ ಮೀಸಲಾತಿ ಪರಿಷ್ಕರಣೆ ಮೂಗಿಗೆ ತುಪ್ಪ ಸವರುವ ಕೆಲಸ: ಮುಖ್ಯಮಂತ್ರಿ ಚಂದ್ರು

Prasthutha|

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಗೆ ವಿರುದ್ಧವಾಗಿ ಮೀಸಲಾತಿಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರವು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರ ಮೂಗಿಗೆ ತುಪ್ಪ ಹಚ್ಚಿ ಮೋಸ ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, “ಪ್ರವರ್ಗ 2ಎ, 2ಬಿ ಮತ್ತು ಪ್ರವರ್ಗ 1ಕ್ಕೆ ಯಾವುದೇ ರೀತಿಯ ಬದಲಾವಣೆ ಮಾಡಬಾರದು ಎಂದು ಹಿಂದುಳಿದ ವರ್ಗಗಳ ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿತ್ತು. ಪ್ರವರ್ಗ 2ಬಿಯನ್ನು ತೆಗದು ಇಡಬ್ಲ್ಯೂಎಸ್’ಗೆ ವರ್ಗಾಯಿಸಬೇಕೆಂದು ಆಯೋಗವು ಮಧ್ಯಂತರ ವರದಿಯಲ್ಲಿ ಎಲ್ಲಿಯೂ ಹೇಳಿಯೇ ಇರಲಿಲ್ಲ. ಮೀಸಲಾತಿ ಪರಿಷ್ಕರಣೆ ಮಾಡಲು ಅಂತಿಮ ವರದಿಯ ತನಕ ಕಾಯಬೇಕೆಂದು ಮಧ್ಯಂತರ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ರಾಜ್ಯ ಸರ್ಕಾರವು ಇವೆಲ್ಲವನ್ನೂ ಗಾಳಿಗೆ ತೂರಿ, ಕೇವಲ ಚುನಾವಣಾ ದೃಷ್ಟಿಯಿಂದ ಕಾನೂನುಬಾಹಿರ, ಸಂವಿಧಾನಬಾಹಿರ ಹಾಗೂ ಅಮಾನವೀಯ ನಿರ್ಧಾರ ತೆಗೆದುಕೊಂಡಿದೆ” ಎಂದು ಹೇಳಿದರು.


“ಮಧ್ಯಂತರ ವರದಿಗೆ ವಿರುದ್ಧವಾದ ಆದೇಶಕ್ಕೆ ಸಹಿ ಹಾಕಿರುವುದಕ್ಕೆ ಸಂಬಂಧಿಸಿ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ತುಳಸಿ ಮುದ್ದಿನೇನರವರು ಪ್ರತಿಕ್ರಿಯೆ ನೀಡಬೇಕು. ಅವರು ಯಾರ ಒತ್ತಡಕ್ಕೆ ಒಳಗಾಗಿ ಇಂತಹ ನಿರ್ಣಯ ತೆಗೆದುಕೊಂಡರೆಂಬುದು ಜನತೆಗೆ ತಿಳಿಯಬೇಕು. ಅಂತಿಮ ವರದಿಯ ತನಕ ಕಾಯಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಅದಕ್ಕೂ ಮೊದಲೇ ರಾಜ್ಯ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿದ್ದೇಕೆ? ಈ ಮೂಲಕ ಮಂತ್ರಿಮಂಡಲವು ಮೋಸ ಮಾಡಿದ್ದು, ಶೀಘ್ರವೇ ರಾಜ್ಯಪಾಲರು ಮಂತ್ರಿಮಂಡಲವನ್ನು ವಜಾ ಮಾಡಬೇಕು” ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
“ಬಿಜೆಪಿಯು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇವೆ, ಕುಟುಂಬ ರಾಜಕಾರಣ ಮಾಡುವುದಿಲ್ಲ, ಭ್ರಷ್ಟಾಚಾರ ಮಾಡುವುದಿಲ್ಲ ಎಂದೆಲ್ಲ ಹೇಳಿತ್ತು. ಅವೆಲ್ಲವೂ ಸುಳ್ಳೆಂದು ಈಗ ಸಾಬೀತಾಗಿದೆ. ಆ ಸುಳ್ಳುಗಳ ಸಾಲಿಗೆ ಮತ್ತೊಂದು ಸೇರ್ಪಡೆಯೇ ಈ ಮೀಸಲಾತಿ ಹೆಚ್ಚಳ. ರಾಜ್ಯದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುತ್ತಿದ್ದೇವೆಂದು ಬಿಜೆಪಿ ಸುಳ್ಳು ಹೇಳಿ ವಂಚಿಸಿದೆ. 9ನೇ ಶೆಡ್ಯೂಲ್‌ಗೆ ತಿದ್ದಪಡಿ ತರದೇ ಮುಸ್ಲಿಮರನ್ನು ಇಡಬ್ಲ್ಯೂಎಸ್‌ಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಬಿಜೆಪಿಯು ಸುಳ್ಳು ಹೇಳುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸಲು ಬಿಜೆಪಿಗೆ ಸಾಧ್ಯವಾಗದ ಕಾರಣ ಮೀಸಲಾತಿ ವಿಚಾರದಲ್ಲಿ ನಾಟಕವಾಡುತ್ತಿದೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.



Join Whatsapp