ಮಂಗಳೂರು: ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಕರ್ನಾಟಕ ಈಗ ಲಂಚಗುಳಿತನ, ಭ್ರಷ್ಟಾಚಾರದ ವಿಷಯದಲ್ಲಿ ಕುಖ್ಯಾತಿ ಪಡೆದಿದೆ. ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ದುರಾಳಿತವೇ ಕಾರಣ. ರಾಜ್ಯದ ಮಾನ ಹರಾಜಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಚುನಾವಣೆ ದೇಶದ ಜನತೆಗೆ ಮಹತ್ವದ ಚುನಾವಣೆಯಾಗಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸವನ್ನು ನಾವು ಇಲ್ಲಿಂದ ಆರಂಭಿಸಬೇಕಿದೆ. ರಾಜ್ಯದ ಚುನಾವಣೆಯಲ್ಲಿ ಕರ್ನಾಟಕದ ಸಮಸ್ಯೆ, ಇಲ್ಲಿನ ಆಡಳಿತ ಮತ್ತು ಅಭಿವೃದ್ಧಿ ಬಗ್ಗೆ ಮಾತನಾಡಬೇಕಿದೆ. ಲಂಚ ಕೊಡದೇ ಕರ್ನಾಟಕದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಹೊರರಾಜ್ಯಗಳಲ್ಲೂ ಕರ್ನಾಟಕದ ಲಂಚದ ವಿಷಯ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದ್ದು, ರಾಜ್ಯದ ಮಾನ ಹರಾಜಾಗುತ್ತಿದೆ ಎಂದು ಟೀಕಿಸಿದರು.
ಕರ್ನಾಟಕದ ಈ ಹಿಂದೆ ಆಡಳಿತ, ಅಭಿವೃದ್ಧಿ ವಿಷಯಗಳಲ್ಲಿ, ಬಂಡವಾಳದ ವಿಷಯಗಳಲ್ಲಿ ಪ್ರಸಿದ್ಧಿ ಹೊಂದಿತ್ತು. ಈಗ ನಾವು ಅದನ್ನು ಕಳೆದುಕೊಳ್ಳುತ್ತಿದ್ದೇವೆ. 40 ಪರ್ಸೆಂಟ್ ಕಮಿಷನ್ ಕೊಟ್ಟರೆ ಎಲ್ಲಾ ಕೆಲಸ ಆಗುತ್ತದೆ ಎಂಬುದು ಜಗಜ್ಜಾಹೀರಾಗಿದೆ. ಇದಕ್ಕೆ ಸಾಕ್ಷಿ ನಾವು ಕೊಡಬೇಕಿಲ್ಲ. ಕರ್ನಾಟಕದ ಗುತ್ತಿಗೆದಾರರ ಸಂಘ, ಅನುದಾನಿತ ಶಾಲಾ- ಕಾಲೇಜಿನವರು ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ ಬರೆದು ಕಳುಹಿಸಿದ್ದು, ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು? ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದ್ದು, ಈ ಸರ್ಕಾರವನ್ನು ತೆಗೆದುಹಾಕಲು ಜನ ತೀರ್ಮಾನಿಸಿದ್ದಾರೆ. ಪ್ರಧಾನಿ ಮೋದಿಯವರು ‘ನಾ ಖಾವೂಂಗಾ – ನಾ ಖಾನೆದೂಂಗ’ ಎಂದು ಹೇಳಿದ್ದರು. ಆದರೆ ಕರ್ನಾಟಕದಲ್ಲಿ ಲಂಚ ತಿನ್ನುತ್ತಿರುವವರಿಗೆ ಮೋದಿ ಬೆಂಬಲ ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರದ ವಿಷಯವಾಗಿ ಮೋದಿ, ಅಮಿತ್ ಶಾ ಯಾಕೆ ಸುಮ್ಮನಿದ್ದಾರೆ ?ಎಂದು ಖರ್ಗೆ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.
ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಎಲ್ಲಾ ಕಡೆ ಸಿಬಿಐ ಐಟಿ, ಇಡಿ ಬಳಸುವ ಮೋದಿ ಅಮಿತ್ – ಶಾ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಯಾಕೆ ಕಣ್ಣೆತ್ತಿ ನೋಡುತ್ತಿಲ್ಲ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ 11 ಲಕ್ಷ ಯುವ ನಿರುದ್ಯೋಗಿಗಳಿದ್ದಾರೆ. 3 ಕೋಟಿ ಜನ ವಿದ್ಯಾವಂತ ನಿರುದ್ಯೋಗಿಗಳು ದೇಶದಲ್ಲಿದ್ದಾರೆ. ಕರ್ನಾಟಕದಲ್ಲಿ 7 ಲಕ್ಷ 70 ಸಾವಿರ ಜನರು ಸರ್ಕಾರಿ ನೌಕರರಿದ್ದಾರೆ. ಸರ್ಕಾರದಲ್ಲಿ 34 ಪರ್ಸೆಂಟ್ ಅಂದರೆ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ. ಉದ್ಯೋಗ ಸೃಷ್ಟಿಸುವುದು ಬಿಡಿ ಖಾಲಿ ಇರುವ ಹುದ್ದೆಗಳನ್ನು ತುಂಬಬಹುದಿತ್ತು. ಆದರೆ ಯಾಕೆ ತುಂಬುವುದಿಲ್ಲ ಎಂದರೆ ಎಸ್ ಸಿ- ಎಸ್ ಟಿ ಜನರಿಗೆ ಹೆಚ್ಚು ಉದ್ಯೋಗ ಹೋಗುತ್ತದೆ ಎಂಬ ಕಾರಣಕ್ಕೆ ಖಾಲಿ ಹುದ್ದೆಗಳನ್ನು ತುಂಬುತ್ತಿಲ್ಲ ಎಂದು ಖರ್ಗೆ ನೇರವಾಗಿ ಆರೋಪ ಮಾಡಿದರು.
ರಾಜ್ಯದ ಖಜಾನೆಯಲ್ಲಿ 3 ಲಕ್ಷ ಕೋಟಿ ರೂ ಹಣ ಇದೆ. ಅದರಲ್ಲೂ 40 ಪರ್ಸೆಂಟ್ ಲಂಚ ಹೊಡೆದರೆ ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಖರ್ಗೆ, ಬಿಜೆಪಿ ಶಾಸಕ ಲಂಚ ಪಡೆದು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದರೂ ಮೋದಿ ಚಕಾರ ಎತ್ತುವುದಿಲ್ಲ. ಬೇರೆ ಪಕ್ಷದವರತ್ತ ಮಾತ್ರ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ವಿರೋಧ ಪಕ್ಷದವರನ್ನು ಮಾತ್ರ ಭ್ರಷ್ಟರು ಎನ್ನುತ್ತಾರೆ. ಭ್ರಷ್ಟರು ಮೋದಿಯವರ ಬಗಲಿನಲ್ಲೇ ಇದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎಷ್ಟು ಬಂಡವಾಳ ಹೂಡಿದೆ? ನಾವು ಕೊಡುವ ಜಿಎಸ್’ಟಿಯಲ್ಲಿ 10 ಪರ್ಸೆಂಟ್ ಕೂಡ ಬರಲ್ಲ. ನಮ್ಮ ಜಿಎಸ್’ಟಿ ಹಣ ಬಂಡವಾಳದ ರೂಪದಲ್ಲಿ ನಮಗೆ ಬರಬೇಕು. ಆದರೆ ಬರುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಕಾಲದಲ್ಲಿ ತುಂಬಾ ಆಬಿವೃದ್ಧಿಯಾಗಿದೆ. ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಕಾಲೇಜುಗಳು, ಉದ್ದಿಮೆಗಳು ಕಾಂಗ್ರೆಸ್ ಕೊಡುಗೆಯಾಗಿದೆ. ಮೋದಿಯವರು 70 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಕೇಳುತ್ತಾರೆ, ಹಾಗೆ ಕೇಳುವಾಗ ವಾಜಪೇಯಿಯವರ ಕಾಲವನ್ನು ಮರೆತುಹೋಗ್ತಾರೆ, ಸ್ವಾತಂತ್ರಕ್ಕೂ ಮುನ್ನ 16% ಅಷ್ಟೇ ಶಿಕ್ಷಣ ಇತ್ತು. ಈಗ 70% ಇದೆ.ಇದು ಯಾರ ಸಾಧನೆ ಎಂದು ಖರ್ಗೆ ಪ್ರಶ್ನಿಸಿದರು.
9 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ ಎಂದು ಹೇಳಿ ಮೋದಿಯವರೇ ಎಂದು ಖರ್ಗೆ, ಡಬಲ್ ಇಂಜಿನ್ ಸರ್ಕಾರದಲ್ಲಿ ಒಂದು ಇಂಜಿನ್( 40%) ಕೆಟ್ಟು ಹೋಗಿದೆ. ಇನ್ನೊಂದು ಇಂಜಿನ್ ಕೂಡ ಕೆಟ್ಟು ಹೋಗುತ್ತಿದೆ. ಒಂದು ಇಂಜಿನ್ 40% ಆದರೆ ಇನ್ನೊಂದು ಇಂಜಿನ್ 80% ಇರಬಹುದು. ಕರ್ನಾಟಕಕ್ಕೆ ಮೋದಿಯವರು ಕೊಟ್ಟ ಕೊಡುಗೆ ಏನೆಂದು ಹೇಳಲಿ ಎಂದು ಸವಾಲು ಹಾಕಿದರು.
ನಾನು ರೈಲು ಸಚಿವನಾಗಿದ್ದಾಗ ಒಂದು ವರ್ಷದಲ್ಲಿ ಹಲವು ರೈಲು ಮಾರ್ಗಗಳನ್ನು ರಾಜ್ಯಕ್ಕೆ ಕೊಟ್ಟಿದ್ದೆ. ನನ್ನ ಕೆಲಸಗಳು ಮೋದಿಯವರಿಗೆ ಕಾಣುವುದಿಲ್ಲ. ಕರ್ನಾಟಕದ ಬಿಜೆಪಿ ಸರ್ಕಾರ ಜನರಿಗೆ ಬೇಕಾಗಿಲ್ಲ, ಹಾಗಾಗಿ ಸರ್ಕಾರ ತೊಲಗಿಸಲು ಜನ ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಟಿಕೆಟ್ ಗೊಂದಲ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನಾವು ಎಲ್ಲರಿಗಿಂತ ಮುಂಚೆ ಅಭ್ಯರ್ಥಿಗಳನ್ನು ಘೋಷಿಸಿದ್ದೆವು. ಟಿಕೆಟ್ ಬೇಡಿಕೆ ಹೆಚ್ಚಾಗಿತ್ತು ಸಾಮಾಜಿಕ ನ್ಯಾಯ ಕೊಡಬೇಕಿತ್ತು ಅದಕ್ಕಾಗಿ ಸ್ವಲ್ಪ ಕಡೆ ಗೊಂದಲ ಆಗಿದೆ ಎಂದು ಒಪ್ಪಿಕೊಂಡರು.
ಸಾಧುಗಳು ರಾಜಕೀಯಕ್ಕೆ ಬರಬಾರದು, ಧರ್ಮದ ಕೆಲಸ ಮಾಡಿ ಎಂದು ಯೋಗಿಗೆ ಸಂಸತ್ತಿನಲ್ಲಿ ಹೇಳಿದ್ದೆ, ಅವಾಗ ಯೋಗಿ ಗೋಳೋ ಎಂದು ಅತ್ತಿದ್ದರು. ಕರ್ನಾಟಕದಲ್ಲಿ ಯೋಗಿ ಪ್ರಭಾವ ಏನೂ ಆಗುವುದಲ್ಲ. ಬಿಜೆಪಿಯವರ ತಪ್ಪುಗಳನ್ನು ಹೇಳಿದರೆ ಸುದ್ದಿವಾಹಿನಿಗಳೇ ಬಂದ್ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಖರ್ಗೆ ಪ್ರತಿಕ್ರಿಯಿಸಿದರು.