ಸಿಲ್ವಾಸ್ಸಾ: ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ್ ಹವೇಲಿಯ ಸಿಲ್ವಾಸ್ಸಾದ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದಿಂದ ಕೋಳಿಯನ್ನು ಶುಚಿಗೊಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರಾಷ್ಟ್ರಧ್ವಜ ಬಳಸಿ ಚಿಕನ್ ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಿಲ್ವಾಸ್ಸಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಕೋಳಿ ಅಂಗಡಿಯಲ್ಲಿ ಕೋಳಿಯನ್ನು ಸ್ವಚ್ಛಗೊಳಿಸಲು ಬಟ್ಟೆಯ ತುಂಡು ಬದಲು ರಾಷ್ಟ್ರಧ್ವಜವನ್ನು ಬಳಸಿ ಅಪಮಾನ ಮಾಡುತ್ತಿರುವುದು ಕಂಡುಬಂದಿದೆ. ದೂರಿನ ಆಧಾರದ ಮೇಲೆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದು ರಾಷ್ಟ್ರದ ಗೌರವಕ್ಕೆ ಅವಮಾನ ತಡೆ ಕಾಯಿದೆ, 1971 ರ ಸೆಕ್ಷನ್ 2 ರ ಅಡಿಯಲ್ಲಿ ಆತನನ್ನು ಬಂಧಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವ್ಯಕ್ತಿ ತಪ್ಪಿತಸ್ಥನೆಂದು ಸಾಬೀತಾದರೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.