ಲಕ್ನೋ: ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಸಹೋದರ ಅಶ್ರಫ್ ಅವರನ್ನು ಏಪ್ರಿಲ್ 15ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕೊಲೆ ಮಾಡಿದ ಸಂಬಂಧ ಶಾಗಂಜ್ ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ಸಿಂಗ್, ಇಬ್ಬರು ಇನ್ಸ್ ಪೆಕ್ಟರ್ ಗಳು ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.
ಅಧಿಕಾರಿ ಸಹಿತ ಐವರು ಪೊಲೀಸರನ್ನು ಅಮಾನತು ಮಾಡಿದ್ದು, ಸಿಟ್- ವಿಶೇಷ ತನಿಖಾ ತಂಡವು ಅಮಾನತಾದ ಪೊಲೀಸರನ್ನು ಕೊಲೆಯ ಬಗ್ಗೆ ಪ್ರಶ್ನಿಸಿತು.
ಅಮಾನತಾದ ಪೊಲೀಸರು ಶಾಗಂಜ್ ಪೊಲೀಸ್ ಠಾಣೆಗೆ ಸೇರಿದವರು. ಏಕೆಂದರೆ ಸಹೋದರರ ಕೊಲೆಯಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಶಾಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ.
ಮಾಜಿ ಸಂಸದ ಮತ್ತವರ ಸಹೋದರರನ್ನು ಗುಂಡು ಹಾರಿಸಿ ಕೊಂದವರು ಲವ್ಲೇಶ್ ತಿವಾರಿ, ಸನ್ನಿ ಸಿಂಗ್, ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿದ್ದಾರೆ. ಪ್ರಯಾಗ್ ರಾಜ್ ವರದಿಗಾರರ ನಡುವೆಯೇ ಬಂದ ಕೊಲೆಗಾರರು ತೀರಾ ಹತ್ತಿರದಲ್ಲಿ ಕೊಲೆ ಮಾಡಿದ್ದಾರೆ.
ಇಂದು ಪ್ರಯಾಗ್ ರಾಜ್ ಕೋರ್ಟ್ ಮೂವರು ಕೊಲೆ ಆಪಾದಿತರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು ಮತ್ತು ಮತ್ತೆ ಏಪ್ರಿಲ್ 23ರಂದು ಹಾಜರು ಪಡಿಸುವಂತೆ ಕೇಳಿತು.
ವಿಶೇಷ ತನಿಖಾ ತಂಡವು ಮೂವರಿಂದ ಹೇಳಿಕೆಗಳನ್ನು ಪಡೆದಿದೆ. ಕೊಲೆಯ ನೋಟವನ್ನು ಮರು ಸೃಷ್ಟಿಸಿ ಪರಿಶೀಲಿಸಿದೆ.
ಈ ಸಂದರ್ಭದಲ್ಲಿ ಸಾಕಷ್ಟು ಪತ್ರಕರ್ತರು ಇದ್ದುದರಿಂದ ಕೊಲೆಯ ಎಲ್ಲ ಹಂತವೂ ನಾನಾ ಕೋನಗಳಲ್ಲಿ ವೀಡಿಯೋ ಆಗಿದೆ. ಕೊಲೆಯ ಬಳಿಕ ಪೊಲೀಸರು ಆ ಮೂವರನ್ನು ಹಿಡಿದಾಗ ಅವರು ಜೈ ಶ್ರೀರಾಂ ಘೋಷಣೆ ಕೂಗಿರುವುದೂ ದಾಖಲಾಗಿದೆ.