ನವದೆಹಲಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ವಿರುದ್ಧ ಅಸ್ಸಾಂನ ಯುವ ಕಾಂಗ್ರೆಸ್ ಅಧ್ಯಕ್ಷೆ ಡಾ. ಅಂಕಿತಾ ದತ್ತಾ ಕಿರುಕುಳ ಆರೋಪ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಶ್ರೀನಿವಾಸ್ ಬಿವಿ ಅವರು ಸತತವಾಗಿ ನನಗೆ ಕಿರುಕುಳ ನೀಡಿದ್ದಾರೆ. ಲಿಂಗ ತಾರತಮ್ಯ ಮಾಡಿದ್ದಾರೆ, ಹೆಣ್ಣು ಎಂಬ ಕಾರಣಕ್ಕೆ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಅಂಕಿತಾ ದೂರಿದ್ದಾರೆ.
ನೀವು ಓಡ್ಕಾ ಕುಡಿಯುತ್ತೀರಾ ಎಂದು ವ್ಯಂಗ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನ ಮೌಲ್ಯಗಳು ಹಾಗೂ ಶಿಕ್ಷಣವು ಇದಕ್ಕೆಲ್ಲಾ ಅವಕಾಶ ನೀಡುವುದಿಲ್ಲ, ಈ ಬಗ್ಗೆ ಈಗಾಗಲೇ ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಕಾರಣಕ್ಕಾಗಿ ಬಹಿರಂಗವಾಗಿ ಈ ವಿಷಯ ಪ್ರಸ್ತಾಪಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಯುವ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಮತ್ತು ಅಸ್ಸಾಂ ಉಸ್ತುವಾರಿ ವರ್ಧನ್ ಯಾದವ್ ಹೇಳಿದ್ದಾರೆ. ಶೀಘ್ರದಲ್ಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದಾರೆ.