ಬೆಳ್ತಂಗಡಿ (ಎ-18): ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಭಾಗವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಕಾರ್ಯಕರ್ತರ ನಡುವೆ ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
- Advertisement -
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉಳ್ಳಾಲ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ ಇಲ್ಲಿ ಈ ಹಿಂದೆ ಆಳಿದ ಎರಡೂ ಪಕ್ಷಗಳ ತಾರತಮ್ಯದ ರಾಜಕಾರಣಕ್ಕೆ ಬೇಸತ್ತ ಬೆಳ್ತಂಗಡಿ ಜನತೆ ಪರ್ಯಾಯ ಪಕ್ಷವನ್ನಾಗಿ ಎಸ್ಡಿಪಿಐ ಯನ್ನು ಆರಿಸಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ ಎಂದಿದ್ದಾರೆ.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಬೆಳ್ತಂಗಡಿ ಕ್ಷೇತ್ರವನ್ನು ಇಡೀ ರಾಜ್ಯಕ್ಕೆ ಮಾದರಿಯಾಗುವ ತಾಲೂಕನ್ನಾಗಿ ಮಾಡಲು ಅಕ್ಬರ್ ಬೆಳ್ತಂಗಡಿ ಅವರಿಗೆ ಮತ ನೀಡಿ. ಇಲ್ಲಿನ ಸಮಾನ ಮನಸ್ಕ ಜನರು ಒಮ್ಮತದ ತೀರ್ಮಾನ ಮಾಡಬೇಕಾಗಿದೆ. ಎಸ್ಡಿಪಿಐ ಗೆದ್ದರೆ ನಿಮ್ಮೊಂದಿಗೆ ನಿರೀಕ್ಷೆಗೂ ಮೀರಿ ಜನಸ್ಪಂದನೆ ನೀಡಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಅಕ್ಬರ್ ಬೆಳ್ತಂಗಡಿ ಈ ಬಾರಿ ಬೆಳ್ತಂಗಡಿಯಲ್ಲಿ ಎಸ್ಡಿಪಿಐ ಪಕ್ಷವನ್ನು ಜನತೆ ಗೆಲ್ಲಿಸುವ ಮೂಲಕ ಅರಾಜಕತೆಯನ್ನು ಸೃಷ್ಟಿ ಮಾಡುವ ಬಿಜೆಪಿ ಮತ್ತು ನಕಲಿ ಜಾತ್ಯಾತೀತರೆನ್ನುವ ಕಾಂಗ್ರೆಸ್ ಪಕ್ಷಗಳಿಗೆ ಇಲ್ಲಿನ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ. ನಿಮ್ಮೆಲ್ಲಾ ಆಶಿರ್ವಾದದಿಂದ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ನನ್ನನ್ನು ಹರಸಿ ಗೆಲ್ಲಿಸಿ. ನಾನು ಸದಾ ನಿಮ್ಮೊಂದಿಗೆ ಜನಸೇವೆಯಲ್ಲಿ ತೊಡಗಿರುತ್ತೇನೆ ಎಂದು ನೆರೆದಿರುವ ಮತದಾರರನ್ನುದ್ದೇಶಿಸಿ ಮಾತನಾಡಿದರು.
ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ನವಾಝ್ ಕಟ್ಟೆ ಮಾತನಾಡಿ ಈ ಬಾರಿ ಬೆಳ್ತಂಗಡಿ ಜನತೆ ಅಕ್ಬರ್ ಬೆಳ್ತಂಗಡಿ ಅವರ ಕೈ ಹಿಡಿಯಲಿದ್ದಾರೆ ಪ್ರತಿ ಬೂತ್, ಗ್ರಾಮ ಮಟ್ಟದಲ್ಲಿ ಜನರು ನಮ್ಮ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೇಳಿದರು.
ಮೆರವಣಿಗೆಯು ಬೆಳ್ತಂಗಡಿ ಸಂತೆಕಟ್ಟೆ ಮುಖ್ಯರಸ್ತೆಯಾಗಿ ಒಂದುವರೆ ಕಿ.ಮೀ. ಸಾಗಿ ಬಸ್ ನಿಲ್ದಾಣವಾಗಿ ಆಡಳಿತ ಸೌಧದಲ್ಲಿರುವ ಚುನಾವಣಾ ಕಚೇರಿಗೆ ಆಗಮಿಸಿದರು. ಮೆರವಣಿಗೆಯಲ್ಲಿ ಮಹಿಳೆಯರು, ವಯಸ್ಕರು, ಯುವಕರು ಸೇರಿ ಸಾವಿರಾರು ಜನರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲು, ದ.ಕ ಜಿಲ್ಲಾ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆ, ಶಾಕಿರ್ ಅಳಕೆಮಜಲು, ದ.ಕ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಮುಲ್ಕಿ ಮೂಡಬಿದ್ರೆ ವಿಧಾನಸಭಾ ಅಧ್ಯಕ್ಷರಾದ ಆಸೀಫ್ ಕೋಟೆಬಾಗಿಲು, ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿಗಳಾದ ನಿಜಾಮ್ ಗೇರುಕಟ್ಟೆ, ನಿಸಾರ್ ಕುದ್ರಡ್ಕ, ಅಶ್ರಫ್ ಕಟ್ಟೆ, ಫಾಝಲ್ ಉಜಿರೆ, ಸ್ವಾಲಿ ಮದ್ದಡ್ಕ, ಸಾದಿಕ್ ಲಾಯಿಲ, ಕ್ಷೇತ್ರ ಸಮಿತಿ ಸದಸ್ಯರಾದ ಇನಾಸ್ ರೋಡ್ರಿಗಸ್, ಅಬ್ದುಲ್ ಅಝೀಝ್ ಝುಹರಿ, ಬ್ಲಾಕ್ ಸಮಿತಿ ಪದಾಧಿಕಾರಿಗಳು, ಎಸ್ಡಿಪಿಐ ಬೆಂಬಲಿತ ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಉಪಸ್ಥಿತರಿದ್ದರು.