ಬೆಂಗಳೂರು; ಭಾರತೀಯ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯಿಂದ ಕಂಪೆನಿಗಳ ವ್ಯಾಜ್ಯ ಇತ್ಯರ್ಥಕ್ಕಾಗಿ ಬೆಂಗಳೂರಿನಲ್ಲಿ “ಮಧ್ಯ ಸ್ಥಿಕೆ ಕೇಂದ್ರ” ತೆರೆಯಲು ನಿರ್ಧರಿಸಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಕಂಪೆನಿ ಸೆಕ್ರೆಟರೀಸ್ ನ ನೂತನ ಅಧ್ಯಕ್ಷ ಸಿಎಸ್ ಮನೀಶ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರಿನ ಐಸಿಎಸ್’ಐ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ನಲ್ಲಿ ವ್ಯಾಜ್ಯ ಇತ್ಯರ್ಥ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆಯಾದರೂ ಅಲ್ಲಿ ಸೂಕ್ತ ಮೂಲ ಸೌಕರ್ಯದ ಕೊರತೆ ಇದೆ. ಬೆಂಗಳೂರಿನ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆ ಇದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಇಲ್ಲಿ ಸುಸಜ್ಜಿತ ಕೇಂದ್ರ ತಲೆ ಎತ್ತಲಿದೆ. ಇದರಿಂದ ಕಂಪನಿಗಳ ನಡುವಿನ ವ್ಯಾಜ್ಯಗಳನ್ನು ಪರ್ಯಾಯ ವ್ಯಾಜ್ಯ ಇತ್ಯರ್ಥ ವ್ಯವಸ್ಥೆ ಮೂಲಕ ಬಗೆಹರಿಸಲು ಸಾಧ್ಯವಾಗಲಿದ್ದು, ಇದಕ್ಕಾಗಿ ಸೂಕ್ತ ವೇದಿಕೆ ಸಿದ್ಧವಾಗಲಿದೆ. ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಿದ್ದು, ಪರ್ಯಾಯ ವ್ಯಾಜ್ಯ ಇತ್ಯರ್ಥ ಕೇಂದ್ರ ತೆರೆಯುವಂತೆ ಸುಪ್ರೀಂ ಕೋರ್ಟ್ ಮುಖ್ಯ್ ನ್ಯಾಯಮೂರ್ತಿ ಅವರು ಸಹ ಕರೆ ನೀಡಿದ್ದು, ಅವರ ಆಶಯಕ್ಕೆ ಅನುಗುಣವಾಗಿ ಬೆಂಗಳೂರಿನ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ ಕೇಂದ್ರ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಐಸಿಎಸ್’ಐನ ಶೈಕ್ಷಣಿಕ ಸಿಎಸ್ ಕಾರ್ಯಕಾರಿ ಕಾರ್ಯಕ್ರಮ ಮತ್ತು ಸಿಎಸ್ ವೃತ್ತಿಪರ ಕೋರ್ಸ್ ಗಳು ಯುನೈಟೆಡ್ ಕಿಂಗ್ ಡಂನ ಅಂತಾರಾಷ್ಟ್ರೀಯ ಅರ್ಹತೆಗಳು ಮತ್ತು ಕೌಶಲ್ಯಗಳ ಸಂಸ್ಥೆಯ ಸ್ನಾತಕೋತ್ತರ ಪದವಿಗಳಿಗೆ ಸಮ ಎಂದು ರಾಷ್ಟ್ರೀಯ ಧನ ಸಹಾಯ ಆಯೋಗ – ಯುಜಿಸಿ ಮಾನ್ಯತೆ ನೀಡಿದೆ ಎಂದು ಹೇಳಿದರು.
ಯುಕೆಇಐಎನ್’ಸಿ -ವೃತ್ತಿಪರ, ಶೈಕ್ಷಣಿಕ ಅರ್ಹತೆಗಳ ಕುರಿತು ತಿಳಿವಳಿಕೆ ಮತ್ತು ಮಾರ್ಗದರ್ಶನ ಮಾಡುವ ಏಜನ್ಸಿಯಾಗಿದೆ. ಐಸಿಎಸ್ಐ ಕೋರ್ಸ್ ಗಳು ಸಂಯುಕ್ತ ಅರಬ್ ಒಕ್ಕೂಟ – ಯುಎಇ ಮತ್ತು ಬ್ರಿಟನ್ ನ ಸ್ನಾತಕೋತ್ತರ ಪದವಿಗಳಿಗೆ ಸಮನಾಗಿದೆ ಎಂದು ಹೇಳಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗದ ಜೊತೆ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಈ ಕೋರ್ಸ್ ಗಳು ನೆರವಾಗಿದೆ ಎಂದು ಹೇಳಿದರು.
ಕಂಪನಿ ಸೆಕ್ರೇಟರೀಸ್ ವಲಯದಲ್ಲಿ ಡಿಜಿಟಲ್ ಕ್ರಾಂತಿಗೆ ಉತ್ತೇಜನ ನೀಡಿದ್ದು, ವೆಬಿನಾರ್ ಗಳು, ಕ್ರಾಶ್ ಕೋರ್ಸ್ ಗಳು, ಸರ್ಟಿಫಿಕೇಟ್ ಕೋರ್ಸ್ ಗಳು ನೈಜ ಸಮಯಕ್ಕೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಆಫ್ ಲೈನ್ ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಆನ್ ಲೈನ್ ವೇದಿಕೆಗೆ ತರಲಾಗಿದೆ. ಜೊತೆಗೆ ಹೊಸ ಪಠ್ಯಕ್ರಮವನ್ನು ಅಳವಡಿಸಲಾಗಿದೆ. ವಿಜ್ಞಾನ ಒಲಿಂಪಿಯಾಡ್ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದ್ಯಾರ್ಥಿ ಸಮುದಾಯದಲ್ಲಿ ಕಂಪೆನಿ ಸೆಕ್ರೇಟರಿಸ್ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಶೀಘ್ರದಲ್ಲೇ ಅಂತಾರಾಷ್ಟ್ರೀಯ ವಾಣಿಜ್ಯ ಒಲಂಪಿಯಾಡ್ ಆಯೋಜಿಸಲಾಗುತ್ತಿದೆ ಎಂದರು ಹೇಳಿದರು.
ಐಸಿಎಸ್ಐ ಬಂಡವಾಳ ಮಾರುಕಟ್ಟೆ ಸಪ್ತಾಹ ಆಯೋಜಿಸಿದ್ದು, “ಜಿ20 ಯಿಂದ ಕಲಿಕೆ: ಸುಸ್ಥಿರತೆ, ಸ್ಪರ್ಧಾತ್ಮಕತೆ ಮತ್ತು ಸಮಗ್ರ ಬಂಡವಾಳ ಮಾರುಕಟ್ಟೆಯತ್ತ ಪಯಣ” ಎಂಬ ವಿಷಯದ ಬಗ್ಗೆ ಏ. 22 ರಿಂದ 29 ರ ವರೆಗೆ ಸಪ್ತಾಹ ನಡೆಯಲಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ಸಂವಾದ ಗೋಷ್ಠಿ, ಉಪನ್ಯಾಸ, ಮಾರುಕಟ್ಟೆ ನಿಯಂತ್ರಕರು, ವಿನಿಮಯಕಾರರು ಪಾಲ್ಗೊಳ್ಳಲಿದ್ದು, ಹೂಡಿಕೆ ಮತ್ತು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಚರ್ಚೆ ಚರ್ಚೆ ನಡೆಯಲಿದೆ. ಮೇ 11-12 ರಿಂದ ಲಂಡನ್ ನ ಐಸಿಎಸ್ಐ ಸಾಗರೋತ್ತರ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಎಲ್ಲರನ್ನೊಳಗೊಂಡ ಸಮಾನ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಜಾಗತಿಕ ಆಡಳಿತ ಬಲಪಡಿಸುವ, ಪ್ರಾಮಾಣಿಕತೆ ಕಾಯ್ದುಕೊಳ್ಳುವ ಕುರಿತು ಚರ್ಚೆ ನಡೆಯಲಿದ್ದು, ಭಾರತ – ಬ್ರಿಟನ್ ವೃತ್ತಿಪರರು ಒಳಗೊಂಡಂತೆ ಅನೇಕ ಪರಿಣಿತರು ಭಾಗವಹಿಸಲಿದ್ದಾರೆ. ಎಂದರು.
ಐಸಿಎಸ್’ಐ ನವೋದ್ಯಮ ಮತ್ತು ಎಂಎಸ್ಎಂಇ ಕ್ಯಾಟಲಿಸ್ಟ್ ಗಳ ನಡುವೆ ಪ್ರತಿ ಹಂತದಲ್ಲೂ ಸೂಕ್ತ ಮಾರ್ಗದರ್ಶನ ಮಾಡುವ ಕೆಲಸದಲ್ಲಿ ನಿರತವಾಗಿದೆ. ನವೋದ್ಯಮಗಳ ನೋಂದಣಿ, ಲೆಕ್ಕಪತ್ರ, ತೆರಿಗೆ, ಹಣಕಾಸು, ಹೂಡಿಕೆ, ಕಾನೂನು ಚೌಕಟ್ಟು ರೂಪಿಸುವುದು ಒಳಗೊಂಡಂತೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ತಂದೆ ತಾಯಿ ಮತ್ತು ಪಾಲಕರನ್ನು ಕಳೆದುಕೊಂಡು ಶಿಕ್ಷಣ ಮುಂದುವರೆಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಾಮಾಜಿಕ ಚಟುವಟಿಕೆಯಡಿ ಶುಲ್ಕದಲ್ಲಿ ರಿಯಾಯಿತಿ ನೀಡುವ ಕ್ರಮಗಳನ್ನು ಸಹ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಐಸಿಎಸ್’ಐ ಉಪಾಧ್ಯಕ್ಷರಾದ ಬಿ. ನರಸಿಂಹನ್, ಕೇಂದ್ರೀಯ ಮಂಡಳಿ ಸದಸ್ಯರಾದ ದ್ವಾರಕಾನಾಥ್ಿ, ದಕ್ಷಿಣ ಭಾರತದ ಪ್ರಾದೇಶಿಕ ಮಂಡಳಿ ಉಪಾಧ್ಯಕ್ಷ ಪ್ರದೀಪ್ ಕುಲಕರ್ಣಿ, ಬೆಂಗಳೂರು ಐಸಿಎಸ್ಐ ಅಧ್ಯ ಕ್ಷರಾದ ಪರಮೇಶ್ವರ್ ಜಿ ಭಟ್, ಕಾರ್ಯದರ್ಶಿ ದೇವಿಕಾ ಸತ್ಯನಾರಾಯಣ ಉಪಸ್ಥಿರಿದ್ದರು.