ನವದೆಹಲಿ: ಮುಸ್ಲಿಮ್ ಸಮುದಾಯಕ್ಕೆ ಹಿಂದುಳಿದ ವರ್ಗದ ಅಡಿ ಕಲ್ಪಿಸಿದ್ದ ಶೇ. 4 ರಷ್ಟು ಮೀಸಲಾತಿಯನ್ನು ಹಿಂಪಡೆದಿರುವ ಹಿಂದಿನ ಸಕಾರಣದ ಕುರಿತು ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.
ಅಂತಿಮ ವರದಿಯವರೆಗೂ ಕಾಯದೇ ಮಧ್ಯಂತರ ವರದಿ ಆಧರಿಸಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಮೌಖಿಕವಾಗಿ ಹೇಳಿತು.
“ಸರ್ಕಾರದ ಈ ಆದೇಶವು ಸಂಪೂರ್ಣವಾಗಿ ತಪ್ಪಾದ ಊಹೆಗಳನ್ನು ಆಧರಿಸಿದೆ… ನಿರ್ಧಾರದ ಹಿಂದಿನ ಅಡಿಪಾಯವೇ ಅಭದ್ರವಾಗಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ” ಎಂದು ನ್ಯಾ. ಜೋಸೆಫ್ ಹೇಳಿದರು. ಅಲ್ಲದೇ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತು.
“ಆಕ್ಷೇಪಣೆ ಸಲ್ಲಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಕಾಲಾವಕಾಶ ಕೋರಿದ್ದಾರೆ. ಇದಕ್ಕಾಗಿ ಏಪ್ರಿಲ್ 17ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 18ರಂದು ಮೊದಲ ಪ್ರಕರಣವನ್ನಾಗಿ ಪಟ್ಟಿ ಮಾಡಲು ನಿರ್ದೇಶಿಸಲಾಗಿದೆ. ಆಕ್ಷೇಪಾರ್ಹವಾದ ಆದೇಶದ ಅನ್ವಯ ಏಪ್ರಿಲ್ 18ರವರೆಗೆ ಯಾವುದೇ ನೇಮಕಾತಿ ಅಥವಾ ಪ್ರವೇಶ ಕಲ್ಪಿಸುವುದಿಲ್ಲ ಎಂಬ ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ದಾಖಲಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು “ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಿಸಲು ಎರಡು ದಿನ ಬಾಕಿ ಇರುವಾಗ ಕರ್ನಾಟಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ ತಡೆ ನೀಡಬೇಕು. ಯಾವುದೇ ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸದೇ ನೀವು ಈ ರೀತಿ ಜನರ ಹಕ್ಕುಗಳನ್ನು ಹೇಗೆ ಹಿಂತೆಗೆದುಕೊಳ್ಳುತ್ತೀರಿ? ನೇರವಾಗಿ ಮುಸಲ್ಮಾನರು ಮೀಸಲಾತಿಯನ್ನು ಕಳೆದುಕೊಂಡಿದ್ದು, ಈ ಕುರಿತು ಯಾವುದೇ ಚರ್ಚೆ ನಡೆಸಲಾಗಿಲ್ಲ… ಅಲ್ಪಸಂಖ್ಯಾತರಿಗೆ ಈ ನ್ಯಾಯಾಲಯದ ರಕ್ಷಣೆ ಅಗತ್ಯವಾಗಿದೆ” ಎಂದು ಕೋರಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಮುಸ್ಲಿಮರಿಗೆ ಮೀಸಲಾಗಿದ್ದ ಕೋಟಾ ಹಿಂಪಡೆದಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದರು.
ರಾಜ್ಯದವರೇ ಆದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಧರ್ಮದ ಕಾರಣಕ್ಕಾಗಿ ಮುಸ್ಲಿಮರನ್ನು ಏಕಾಂಗಿಯಾಗಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು ಪ್ರವೇಶಾತಿ ಕಲ್ಪಿಸುವ ಸಂದರ್ಭದಲ್ಲಿ ಮೀಸಲಾತಿಯನ್ನು ತುರ್ತಾಗಿ ಹಿಂಪಡೆಯಲಾಗಿದೆ” ಎಂದು ಆಕ್ಷೇಪಿಸಿದರು.
ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಅರ್ಜಿದಾರರು ತಪ್ಪು ಹೇಳಿಕೆ ನೀಡುತ್ತಿದ್ದು, ಅವರ ಪರವಾಗಿ ತಡೆಯಾಜ್ಞೆ ಮಾಡುವ ನಿಟ್ಟಿನಲ್ಲಿ ನ್ಯಾಯಾಲಯವು ಮೇಲ್ನೋಟದ ನಿರ್ಧಾರಕ್ಕೆ ಬರಬಾರದು. ತಡೆ ನೀಡುವುದಕ್ಕೂ ಮುನ್ನ ಆಕ್ಷೇಪಣೆ ಸಲ್ಲಿಸಲಾಗುವುದು. ಇದಕ್ಕೂ ಮುನ್ನ, ಯಾವುದೇ ಪ್ರವೇಶಾತಿ ಅಥವಾ ನೇಮಕಾತಿ ಮಾಡಲಾಗುವುದಿಲ್ಲ. ಬದಲಾವಣೆ ಮಾಡಲಾಗದಂಥ ಯಾವುದೂ ಸಂಭವಿಸುವುದಿಲ್ಲ” ಎಂದರು.
ಮಧ್ಯಪ್ರವೇಶ ಕೋರಿದ್ದ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಮುಂದಿನ ಮಂಗಳವಾರದವರೆಗೆ ವಿಚಾರಣೆ ಮುಂದೂಡುವಂತೆ ಪೀಠಕ್ಕೆ ಮನವಿ ಮಾಡಿದರು.
ಮುಸ್ಲಿಮ್ ಸಮುದಾಯವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲುಎಸ್) ಮೀಸಲಾಗಿರುವ ಶೇ.10 ಕೋಟಾದ ಅಡಿ ಮೀಸಲಾತಿ ಪಡೆಯಲು ಅರ್ಹವಾಗಿದೆ. ಮುಸ್ಲಿಮ್ ಸಮುದಾಯದಿಂದ ಹಿಂಪಡೆಯಲಾಗಿರುವ ಶೇ. 4 ಮೀಸಲಾತಿಯನ್ನು ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ ಮಾಡಿತ್ತು.
(ಕೃಪೆ: ಬಾರ್ & ಬೆಂಚ್)