ಚಂಡೀಗಡ: ಪಂಜಾಬಿನ ಭಟಿಂಡ ಮಿಲಿಟರಿ ನೆಲೆಯಲ್ಲಿ ಬುಧವಾರ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಸೈನಿಕರ ಹುತಾತ್ಮರಾಗಿದ್ದಾರೆ.
“ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಸ್ಥಳೀಯ ಪೊಲೀಸರೊಂದಿಗೆ ಗುಂಡಿನ ಕಾಳಗಕ್ಕೆ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ಆರಂಭವಾಗಿದೆ” ಎಂದು ಸೇನೆ ತಿಳಿಸಿದೆ.
“ಇದು ಅನಿರೀಕ್ಷಿತ ವಿಷಾದದ ಘಟನೆಯಾಗಿದೆ. ಆರ್ಟಿಲರಿ ಘಟಕದ ನಾಲ್ವರು ಸೈನಿಕರು ಗುಂಡಿಗೆ ಬಲಿಯಾಗಿದ್ದಾರೆ. ಬೇರೆ ಯಾರಿಗೂ ಗಾಯವಾಗಲಿ, ಸ್ವತ್ತು ನಷ್ಟವಾಗಲಿ ಆಗಿಲ್ಲ.” ಎಂದು ಸೇನಾ ವಾಯವ್ಯ ಕಮಾಂಡಿನ ಮುಖ್ಯ ಕಚೇರಿ ಮಾಹಿತಿ ನೀಡಿದೆ.
“ಎಲ್ಲ ನಿಟ್ಟಿನಿಂದಲೂ ತನಿಖೆ ಆರಂಭವಾಗಿದೆ. ಎರಡು ದಿನಗಳ ಹಿಂದೆ 28 ರೌಂಡು ಗುಂಡಿನೊಂದಿಗಿದ್ದ ಐಎನ್ ಎಸ್ ಎಎಸ್ ರೈಫಲ್ ಕಾಣೆಯಾಗಿತ್ತು ಅದನ್ನು ಗಮನದಲ್ಲಿಡಲಾಗಿದೆ” ಎಂದೂ ಹೇಳಿಕೆಯಲ್ಲಿದೆ. ಈ ಸಂಬಂಧ ತನಿಖೆ, ತಪಾಸಣೆ ಆಪರೇಶನ್ ಎಲ್ಲವೂ ನಡೆದಿದೆ.
“ಇದು ಉಗ್ರ ದಾಳಿ ಅಲ್ಲ; ಒಳಗಿನದೇ ಬಿಕ್ಕಟ್ಟು. ಏನೋ ನಡೆಯಬಾರದ್ದು ನಡೆದಿದೆ. ಆದರೆ ಸೇನೆಯು ಹೆಚ್ಚಿನದೇನನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸೇನೆಯೊಳಗೇ ಸರ್ವ ತಪಾಸಣೆ ನಡೆದಿದೆ.” ಎಂದು ಭಟಿಂಡದ ಸೀನಿಯರ್ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್ ಗುಲಾಬ್ ಸಿಂಗ್ ಖುರಾನಾ ಹೇಳಿದರು.