ಬಿಜೆಪಿ ಟಿಕೆಟ್ ಮಿಸ್: ಜಗದೀಶ್ ಶೆಟ್ಟರ್ ಬಂಡಾಯ !

Prasthutha|

ಹುಬ್ಬಳ್ಳಿ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಶಾಸಕರು ಸೇರಿದಂತೆ ಹಲವು ಶಾಸಕರಿಗೆ ಟಿಕೆಟ್ ನೀಡದಿರಲು ಹೈಕಮಾಂಡ್ ತೀರ್ಮಾನಿಸಿರುವ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಂಡಾಯದ ಬಾವುಟ ಬೀಸಿದ್ದಾರೆ. ಈ ಬಾರಿ ನಾನು ಸ್ಪರ್ಧೆ ಮಾಡಿಯೇ ತೀರುವೆ ಎಂದಿರುವ ಜಗದೀಶ್ ಶೆಟ್ಟರ್, ವರಿಷ್ಠರ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿರುವ ಬಿಜೆಪಿ ವರಿಷ್ಠರು ಈ ಬಾರಿ ಸ್ಪರ್ಧೆ ಮಾಡದಂತೆ ತಿಳಿಸಿ, ಹೊಸಬರಿಗೆ ಅವಕಾಶ ನೀಡುವಂತೆ ಸೂಚನೆ ಕೊಟ್ಟಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಗದೀಶ್ ಶೆಟ್ಟರ್, ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಹೈಕಮಾಂಡ್ ನಿಂದ ಕರೆ ಬಂದಿರುವ ಮಾಹಿತಿ ನೀಡಿದರು. ಹೈಕಮಾಂಡ್‌ ನಾಯಕರು ಕರೆ ಮಾಡಿ ಈ ಬಾರಿ ನೀವು ಸ್ಪರ್ಧೆ ಮಾಡುವುದು ಬೇಡ, ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ನಾನು ಸಮ್ಮತಿಸಿಲ್ಲ, ನಾನು ಯಾಕೆ ಸ್ಪರ್ಧೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದೇನೆ, ನನಗೆ ಟಿಕೆಟ್‌ ಕೊಡಲೇಬೇಕು ಎಂದು ಹೇಳಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.

ಹೈಕಮಾಂಡ್ ನಿರ್ಧಾರವನ್ನು ಒಪ್ಪಲ್ಲ ಎಂದಿರುವ ಶೆಟ್ಟರ್, 30 ವರ್ಷದಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಸೇವೆಯನ್ನು ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಶ್ರಮಿಸಿದ್ದೇನೆ. 6 ಬಾರಿ ಗೆದ್ದಿದ್ದೇನೆ, ಪ್ರತಿಬಾರಿ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೇನೆ, ವರಿಷ್ಠರ ನಿರ್ಧಾರದಿಂದ ನನಗೆ ಬೇಸರವಾಗಿದೆ, ಮಾಜಿ ಸಿಎಂ ಹಾಗು ಹಿರಿಯ ನಾಯಕರಿಗೆ ಹೈಕಮಾಂಡ್‌ ಗೌರವ ನೀಡಬೇಕು, ನಾಮಪತ್ರ ಸಲ್ಲಿಕೆಗೆ 2-3 ದಿನಗಳು ಇರುವಾಗ ಹೇಳಿದ್ದು ಸರಿಯಲ್ಲ. ನನಗೆ ನನ್ನ ಕ್ಷೇತ್ರದ ಜನರ ಆಶೀರ್ವಾದವಿದೆ, ನನ್ನ ರಾಜಕಾರಣದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ. ಬಿಜೆಪಿ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಹಾಗಿದ್ದರೂ ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ಆದರೆ ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ  ಎಂದು ಶೆಟ್ಟರ್ ತಿಳಿಸಿದರು.

- Advertisement -



Join Whatsapp