ಉಳ್ಳಾಲ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವವಣೆಗೆ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ರಿಯಾಝ್ ಫರಂಗಿಪೇಟೆ ಸ್ಪರ್ಧಿಸುತ್ತಿದ್ದು, ಮತಯಾಚನೆ ಕಾರ್ಯವು ಬೂತ್ ಮಟ್ಟದಲ್ಲಿ ಬಹಳ ಬಿರುಸಿನಿಂದ ನಡೆಯುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ತಿಳಿಸಿದ್ದಾರೆ.
ಉಳ್ಳಾಲ ಕ್ಷೇತ್ರದಲ್ಲಿ 10ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಚುನಾವಣೆಗೆ ಬೇಕಾದ ತಯಾರಿ ನಡೆಸಿದ್ದು ಮನೆ ಮನೆಗೆ ಭೇಟಿ ನೀಡಿ SDPI ಪಕ್ಷದ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿದ್ದು, ಕ್ಷೇತ್ರದ ಜನತೆ ಒಪ್ಪಿಕೊಳ್ಳುವಂತಹ ಪಕ್ಷದ ಪ್ರಣಾಳಿಕೆಯು ಬಿಡುಗಡೆಯಾಗಿದ್ದು ಇದನ್ನು ಮನೆ ಮನೆಗೆ ತೆರಳಿ ಜನತೆಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ನಡೆಸುತ್ತಿದ್ದಾರೆ ಎಂಬ ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಭೃಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ನೀಡುವುದು, ಸುಸಜ್ಜಿತ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಸ್ಥಾಪನೆ, ಕುಡಿಯುವ ನೀರಿಗೆ ಶಾಶ್ವತ ಪರಿಹಾರ, ಅಲ್ಪಸಂಖ್ಯಾತರ ರಕ್ಷಣೆಗೆ ವಿಶೇಷ ಕಾನೂನಿಗೆ ಆಗ್ರಹ, ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ವ್ಯವಸ್ಥೆ, ಕಡಲ್ಕೊರೆತ ನೀಗಿಸಲು ಶಾಶ್ವತ ಪರಿಹಾರ, ಸುಸಜ್ಜಿತ ಆಟದ ಮೈದಾನ ಸ್ಥಾಪನೆ, ಸುಸಜ್ಜಿತ ಮಾರುಕಟ್ಟೆ ಸ್ಥಾಪನೆ, ಕ್ಷೇತ್ರದ ಉದ್ದಕ್ಕೂ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರ ಸ್ಥಾಪನೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ತಡೆ, ನಾಗರಿಕ ಸೇವಾ ಹುದ್ದೆ ಮತ್ತು ಸರಕಾರಿ ಸೇವೆಗಳಲ್ಲಿ ಭಡ್ತಿ ಪಡೆಯಲು ಉಚಿತ ತರಬೇತಿ, ಪಾಳು ಬಿದ್ದಿರುವ ಸರಕಾರಿ ಕಚೇರಿ ಹಾಗೂ ಶಾಲಾ ಕಟ್ಟಡಗಳನ್ನು ಸುಸಜ್ಜಿತವಾಗಿ ಪುನರ್ ನಿರ್ಮಿಸುವುದು, ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಮುಂಜಾಗೃತಾ ಕ್ರಮ,ಕ್ಷೇತ್ರ ವ್ಯಾಪ್ತಿಯ ನಿರ್ಗತಿಕರಿಗೆ ಉಚಿತ ಊಟದ ಮನೆ ಇವುಗಳು ಒಳಗೊಂಡಿರುತ್ತದೆ.
ನಮ್ಮ ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹೋರಾಟ ರಂಗದಿಂದಲೇ ರಾಜಕೀಯ ಪ್ರವೇಶಿಸಿದವರಾಗಿದ್ದು ಎಲ್ಲಾ ಅನ್ಯಾಯಗಳ ವಿರುದ್ಧ ತಕ್ಷಣ ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಕ್ಷೇತ್ರದ ಮತದಾರರು ಇವರನ್ನು ವಿಧಾನಸೌಧದ ಒಳಗೆ ಆರಿಸಿ ಕಳುಹಿಸಿದರೆ ನಿಮ್ಮವರಲ್ಲಿ ಒಬ್ಬರಾಗಿ ಕ್ಷೇತ್ರದ ಜನತೆಯ ನ್ಯಾಯದ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.