ಸೌಂಡ್ ಸಿಸ್ಟಂ ಶಬ್ಧ ಕಡಿಮೆ ಮಾಡಿ ಎಂದಿದ್ದಕ್ಕೆ ಟೆಕ್ಕಿಗಳಿಂದ ಮನೆ ಮಾಲೀಕನ ಕೊಲೆ

Prasthutha|

ಬೆಂಗಳೂರು: ಮನೆಯಲ್ಲಿ ಸೌಂಡ್ ಸಿಸ್ಟಂ ಮೂಲಕ ತಡರಾತ್ರಿವರೆಗೂ ಜೋರಾಗಿ ಹಾಡು ಹಾಕಿಕೊಂಡು ಪಾರ್ಟಿ ಮಾಡುವ ಸಾಫ್ಟ್’ವೇರ್ ಇಂಜಿನಿಯರ್’ಗಳಿಗೆ ಸೌಂಡ್ ಕಡಿಮೆ ಮಾಡಿ ಎಂದು ಹೇಳಿದ ಪಕ್ಕದ ಮನೆಯ ಮಾಲೀಕನನ್ನು ಹೊಡೆದು ಕೊಲೆಗೈದ ದಾರುಣ ಘಟನೆ ಎಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಎಚ್ಎಎಲ್ ಬಳಿಯ ವಿಜ್ಞಾನ ನಗರದಲ್ಲಿ ವಾಸವಿದ್ದ ಒಡಿಶಾ ಮೂಲದ ಸಾಫ್ಟ್’ವೇರ್ ಇಂಜಿನಿಯರ್’ಗಳು, ಮದ್ಯಪಾನ ಮಾಡಿ ಪಾರ್ಟಿ ಮಾಡುವಾಗ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಲೆ ಮಾಡಿ ಅವಾಂತರ ಸೃಷ್ಟಿಸಿದ್ದಾರೆ. ಈಗ ಟೆಕ್ಕಿಗಳ ಅವಾಂತರದಿಂದ ಒಂದು ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿಯನ್ನೇ ಕಳೆದುಕೊಂಡ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರತಿನಿತ್ಯ ಪಾರ್ಟಿ:
ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಕೆಲಸಕ್ಕೆ ಹೋಗುತ್ತಿದ್ದ ಇಂಜಿನಿಯರ್’ಗಳು ರಾತ್ರಿ ವೇಳೆ ಪಾರ್ಟಿ ಮಾಡುತ್ತಿದ್ದು ಮನೆಯನ್ನು ಮಿನಿ ಥಿಯೇಟರ್ ಹಾಗೂ ಪಬ್’ನಂತೆ ಮಾರ್ಪಾಡು ಮಾಡಿಕೊಂಡಿದ್ದಾರೆ. ಮನೆಯಲ್ಲಿ ದೊಡ್ಡ ಸೌಂಡ್ ಸಿಸ್ಟಂ ಗಳನ್ನು ಇಟ್ಟುಕೊಂಡು ಪ್ರತಿನಿತ್ಯ ರಾತ್ರಿ ಹಲವು ಜನರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ಇದರಿಂದ ತೀವ್ರ ಕಿರಿಕಿರಿ ಉಂಟಾಗಿದ್ದರಿಂದ ಸೌಂಡ್ ಕಡಿಮೆ ಮಾಡಿ ಎಂದು ಪಕ್ಕದ ಮನೆಯ ಮಾಲೀಕರು ಹೇಳಿದ್ದಾರೆ. ಇಷ್ಟು ಹೇಳಿದ್ದಕ್ಕೆ ಕೋಪಗೊಂಡ ಟೆಕ್ಕಿಗಳು ಕುಡಿದ ಅಮಲಿನಲ್ಲಿ ಗುಂಪಾಗಿ ಸೇರಿಕೊಂಡು ಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.


ಹೊಡೆತ ತಿಂದು ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಅವರನ್ನು ಲಾಯಿಡ್ ನೇಮಯ್ಯ ಎಂದು ಗುರುತಿಸಲಾಗಿದೆ. ಟೆಕ್ಕಿಗಳು ಮನೆಯಲ್ಲಿ ಪಾರ್ಟಿ ಮಾಡುತ್ತಾ ಜೋರು ಸೌಂಡ್ ನಲ್ಲಿ ಹಾಡು ಹಾಕಿದ್ದರು. ಈ ವೇಳೆ ಸೌಂಡ್ ಕಡಿಮೆ ಮಾಡಿ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದು ಮನವಿ ಮಾಡಿದ್ದಾರೆ. ಇದಾದ ಸ್ವಲ್ಪ ಸಮಯದ ಬಳಿಕ ಎಲ್ಲರೂ ಎಣ್ಣೆ ಹಾಕಿಕೊಂಡು ನಶೆ ಏರಿಸಿಕೊಂಡು ನಂತರ ನೇಮಯ್ಯ ಅವರ ಮನೆಗೆ ಬಂದು ಮನಸೋ ಇಚ್ಛೆ ಥಳಿಸಿದ್ದಾರೆ. ಗಲಾಟೆ ಬಳಿಕ ನೇಮಯ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

- Advertisement -


ಈ ದುರ್ಘಟನೆ ಏಪ್ರಿಲ್ 2ರ ರಾತ್ರಿ ನಡೆದಿದೆ. ಗಲಾಟೆ ಬಳಿಕ ನೇಮಯ್ಯ ಅವರ ಕುಟುಂಬ ಸದಸ್ಯರು ಎಚ್ಎಎಲ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ಹಲ್ಲೆ ಕೇಸ್ ದಾಖಲು ಮಾಡಿಕೊಂಡಿದ್ದರು. ನಂತರ ನೇಮಯ್ಯ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ನು ನೇಮಯ್ಯ ಅವರ ಮೇಲೆ ಹಲ್ಲೆ ಮಾಡಿದ ಟೆಕ್ಕಿಗಳನ್ನು ಒಡಿಶಾ ಮೂಲದವರು ಎಂದು ತಿಳಿದುಬಂದಿದೆ.



Join Whatsapp