ಬೀದರ್: ಮೋದಿ ಹವಾ ಕೇಂದ್ರದ್ದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇದು ದಕ್ಷಿಣ ಭಾರತ, ಇಲ್ಲಿನ ವಾತಾವರಣ, ದೂರದೃಷ್ಟಿನೇ ಬೇರೆ. ಇಲ್ಲಿನ ಜನ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂದು ಮಾಜಿ ಸಚಿವ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಹೊರಗಿನವರ ಯಾರ ಆಟವು ನಡೆಯದು. ಹಿಂದಿನಿಂದಲೂ ಅವರೆಲ್ಲಾ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಆದರೆ ಇಲ್ಲಿಯವರೆಗೆ ಪೂರ್ಣ ಬಹುಮತ ಬಿಜೆಪಿಗೆ ಸಿಕ್ಕಿಲ್ಲ. ಈ ಬಾರಿ ನಮ್ಮ ಪಕ್ಷಕ್ಕೆ ರಾಜ್ಯದ ಜನ ಬಹುಮತ ನೀಡುತ್ತಾರೆ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳು ನಾಡಿನ ಜನತೆಗೆ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಈ ಹಿಂದೆ ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿತ್ತು. ಈಗ ನಾಲ್ಕು ವರ್ಷ ಬಿಜೆಪಿ ಸರ್ಕಾರ ನಡೆಸಿದೆ. ನಾಡಿನ ಬಡವರು, ರೈತರು ಇಬ್ಬರ ಆಡಳಿತವನ್ನು ನೋಡಿ ಬೇಸತ್ತಿದ್ದಾರೆ. ಇವತ್ತು ನಮ್ಮ ಕ್ಷೇತ್ರದಲ್ಲಿ ಕೂಡ ಬೇರೆ ಬೇರೆ ಪಕ್ಷಗಳನ್ನು ತೊರೆದು ಬಹಳಷ್ಟು ಜನ ನಮ್ಮ ಪಕ್ಷಕ್ಕೆ ಸೇರಿ ಬೆಂಬಲ ಸೂಚಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ.
ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿ ಇದ್ದಾಗ ಹದಿನಾಲ್ಕು ತಿಂಗಳಲ್ಲಿ ಇಪ್ಪತ್ತೈದು ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೆವು. ಈಗ ಕೂಡ ನಮ್ಮ ಪ್ರಣಾಳಿಕೆಯಲ್ಲಿ ರೈತರಿಗೆ 24 ತಾಸು ಕರೆಂಟ್, ಸ್ವಸಹಾಯ ಗುಂಪುಗಳ ಸಾಲಮನ್ನಾ, ಪೆನ್ಸೆನ್ ಗಳನ್ನು ಹೆಚ್ಚಿಸುವುದು, ರೈತರ ಸಾಗುವಳಿಗಾಗಿ ಎಕರೆಗೆ ಹತ್ತು ಸಾವಿರ ರೂ. ಕೊಡುವುದು ಹೀಗೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಈಗ ನಮ್ಮ ಪಕ್ಷಕ್ಕೆ ಹೆಚ್ಚಿನ ಒಲವು ಕಂಡುಬರುತ್ತಿದೆ. ಕೇವಲ ನಮ್ಮ ಕ್ಷೇತ್ರ ಮಾತ್ರವಲ್ಲ ಬೀದರ್ ನಿಂದ ಚಾಮರಾಜನಗರದ ತನಕ ಒಲವು ಇದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟಿದ್ದು:
ನಾವು ಈಗಾಗಲೇ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದೇವೆ. ಮಲ್ಲಿಕಾರ್ಜುನ ಖೂಬಾರವರು ನಮ್ಮ ಪಕ್ಷದವರು ಮೊದಲಿನಿಂದಲೂ ನಮ್ಮ ಜೊತೆಗೆ ಇದ್ದರು. ಈಗ ಅವರು ಕೂಡ ಮರಳಿ ಬಂದಿದ್ದಾರೆ. ಅವರು ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ಟಿಕೆಟ್ ವಿಷಯದಲ್ಲಿನ ತೀರ್ಮಾನವನ್ನು ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳಲಿದ್ದಾರೆ.
ಹಾಸನ ಟಿಕೆಟ್ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು:
ಹಾಸನ ಟಿಕೆಟ್ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಸೇರಿ ದೇವೇಗೌಡರ ವಾಣಿಯಂತೆ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಲ್ಲರೂ ಅವರ ಆದೇಶವನ್ನು ಪಾಲಿಸುತ್ತೇವೆ. ಬೇರೆ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕುಟುಂಬ ರಾಜಕೀಯವಿಲ್ಲ. ಬಿಜೆಪಿ, ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕೀಯ ಇಲ್ವಾ..? ನಮ್ಮಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಟಿಕೆಟ್ ಗೊಂದಲ ದೇವೇಗೌಡರ ಸಮ್ಮುಖದಲ್ಲಿ ಬಗೆಹರಿಯುತ್ತದೆ ಎಂದರು.