ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪ್ರಚಾರಕ್ಕೆ ಕೆಲವು ನಿಯಮಗಳಿದ್ದು, ಅವುಗಳನ್ನು ಉಲ್ಲಂಘಿಸಿ ಪ್ರಚಾರ ನಡೆಸಿದರೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಆಟೋ ರಿಕ್ಷಾದ ಮೇಲೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಫೋಟೋ ಹಾಕಿದವರಿಗೆ ನೀತಿ ಸಂಹಿತೆಯ ಬಿಸಿ ಮುಟ್ಟಿದೆ.
ಬೆಂಗಳೂರಿನಲ್ಲಿ ಪೊಲೀಸರು ಆಟೋಗಳ ಮೇಲೆ ರಾಜಕೀಯ ಪ್ರಚಾರ ಮಾಡಿದ ಸುಮಾರು 450ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ದಂಡ ವಸೂಲಿ ಮಾಡಿದ್ದಾರೆ. ಮೊದಲ ಬಾರಿ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ದಂಡ ವಿಧಿಸುತ್ತೇವೆ, ಇದು ಪುನರಾವರ್ತನೆಯಾದರೆ ಅಂತಹ ಆಟೋಗಳ ಪರವಾನಿಗೆ ರದ್ದು ಮಾಡುತ್ತೇವೆ ಎಂದು ಆರ್ ಟಿಒ ಜಂಟಿ ನಿರ್ದೇಶಕ ಹಾಲಸ್ವಾಮಿ ಹೇಳಿದ್ದಾರೆ.
ಆಟೋಗಳ ಮೇಲೆ ರಾಜಕೀಯ ಪ್ರೇರಿತ ಭಾವಚಿತ್ರ ಅಥವಾ ಚಿಹ್ನೆ ಇದ್ದರೆ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿದರು. ಆಟೋಗಳ ಮೇಲೆ ಭಾವಚಿತ್ರ ಅಂಟಿಸಿ ಭಾರಿ ಪ್ರಚಾರ ಪಡೆಯುತ್ತಿರುವ ರಾಜಕೀಯ ನಾಯಕರ ತಂತ್ರವನ್ನು ಈ ಮೂಲಕ ಅಧಿಕಾರಿಗಳು ವಿಫಲಗೊಳಿಸಿದ್ದಾರೆ.