ಬೆಂಗಳೂರು; ವನ್ನಿಕುಲ ಕ್ಷತ್ರಿಯ ಜನಾಂಗವನ್ನು ತಿಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿರುವುದು ಸರಿಯಲ್ಲ. ಮೀಸಲಾತಿ ಪಟ್ಟಿಯಲ್ಲಿ ವನ್ನಿಯಕುಲ ಕ್ಷತ್ರಿಯ ಹಾಗೂ ಅದರ ಉಪ ಜಾತಿಗಳನ್ನು ಬೇರ್ಪಡಿಸಿ, ನೂತನವಾಗಿ ವನ್ನಿಯಕುಲ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ರಾಜ್ಯ ವನ್ನಿಯಕುಲ ಕ್ಷತ್ರಿಯ ಸಂಘ ಆಗ್ರಹಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಸ್.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಶಂಕರ್.ಡಿ. ವನ್ನಿಯಕುಲ ಕ್ಷತ್ರಿಯ ಹಾಗೂ ಅದರ ಉಪ ಜಾತಿಗಳಾದ ವನ್ನಿಯ, ವನ್ನಿಯರ್, ವನ್ನಿಯ ಗೌಡರ್, ಗೌಂಡರ್, ಕಂಡರ್, ಪಡೆಯಾಚಿ, ಪಲ್ಲಿ, ಅಗ್ನಿಕುಲ, ಶಂಭು ಕುಲ ಕ್ಷತ್ರಿಯ ಜನಾಂಗ ಸೇರಿದಂತೆ 45ಲಕ್ಷದಷ್ಟು ಜನಸಂಖ್ಯೆ ಹೊಂದಿದ್ದು. ಆರ್ಥಿಕವಾಗಿ ಹಿಂದುಳಿದ ಜನಾಂಗವಾಗಿದೆ. ವನ್ನಿಯಕುಲ ಕ್ಷತ್ರಿಯ ಹಾಗೂ ಅದರ ಉಪಜಾತಿಗಳನ್ನು ರಾಜ್ಯ ಮೀಸಲಾತಿ ಪಟ್ಟಿಯ ಪವರ್ಗ ಎರಡರ ಅಡಿಯಲ್ಲಿ ತಿಗಳ ಜನಾಂಗದ ಉಪಜಾತಿಗಳಾಗಿ ಸೇರಿಸಲ್ಪಟ್ಟಿರುತ್ತದೆ.ಆದರೆ ತಿಗಳ ಮತ್ತು ಅದರ ಉಪಜಾತಿಗಳಿಗೂ ಹಾಗೂ ವನ್ನಿಯ ಕುಲ ಕ್ಷತ್ರಿಯ ಮತ್ತು ಅದರ ಉಪ ಜಾತಿಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ತಿಳಿಸಿದರು.
ಸಂಘದ ಸಂಚಾಲಕ ಶ್ರೀನಿವಾಸ್ ಮಾತನಾಡಿ, ಇತೀಚೆಗೆ ರಾಜ್ಯ ಸರ್ಕಾರ ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ. ಆದರೆ ಅವರ ಧಾರ್ಮಿಕ ವಿಧಿ ವಿಧಾನಗಳು, ಆಚಾರ, ವಿಚಾರ, ಸಂಪ್ರದಾಯ ಬಿನ್ನವಾಗಿದ್ದು. ವನ್ನಿಯಕುಲ ಕ್ಷತ್ರಿಯ ಜನಾಂಗವನ್ನು ಸೇರ್ಪಡೆಗೊಳಿಸಿರುವ ತಿಗಳ ಅಭಿವೃದ್ಧಿ ನಿಗಮ ಆದೇಶವನ್ನು ರದ್ದುಪಡಿಸಬೇಕು ಎಂದು ಹೇಳಿದರು.