ಬೆಂಗಳೂರು: ಭೂ ಮಂಜೂರಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕ ಕೆ ಎಸ್ ಲಿಂಗೇಶ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಗುರುವಾರ ಈ ಕುರಿತ ಪ್ರಕರಣದಲ್ಲಿ ಆದೇಶಿಸಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 156 (3)ರ ಅನುಸಾರ ತನಿಖೆ ನಡೆಸಿ 2023ರ ಜುಲೈ 7ಕ್ಕೆ ವರದಿ ಸಲ್ಲಿಸುವಂತೆ ಬೇಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಬೇಲೂರು ತಾಲ್ಲೂಕಿನ ಅಂದಾಜು ಮಾರುಕಟ್ಟೆ ದರ 775 ಕೋಟಿಗೂ ಹೆಚ್ಚಿನ ಮೌಲ್ಯದ 2,750 ಎಕರೆ 86 ಗುಂಟೆಯಷ್ಟು ಸರ್ಕಾರಿ ಜಮೀನನ್ನು ಬಲಾಢ್ಯ, ಅನರ್ಹ, ಅಪ್ರಾಪ್ತ ಮತ್ತು ಬೆಂಗಳೂರಿನ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಶಾಸಕ ಕೆ ಎಸ್ ಲಿಂಗೇಶ್ ಸೇರಿದಂತೆ ಒಟ್ಟು 15 ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಕೋಲಾರ ಗಾಂಧಿನಗರದ ನಿವಾಸಿ ಕೆ ಸಿ ರಾಜಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆಯಲಾದ ವಿವರಗಳ ಪ್ರಕಾರ ಬೇಲೂರು ತಾಲ್ಲೂಕು ಕಸಬಾ ಹೋಬಳಿಯ ಪುರಸಭೆ ವ್ಯಾಪ್ತಿಯ 3 ಕಿ ಮೀ ಒಳಗಿನ ಮಾವಿನಕೆರೆ, ಬಂಟೇನಹಳ್ಳಿ, ಡಣಾಯ್ಕನಹಳ್ಳಿ, ಮುದಿಗೆರೆ ಹಾಗೂ ರಾಯಪುರದ ಸರ್ವೇ ನಂಬರ್‌ಗಳ ಪೈಕಿ 18 ಜನರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. 2016ರ ಅಕ್ಟೋಬರ್ 28ರಿಂದ 2022ರ ಡಿಸೆಂಬರ್ 11ರ ಮಧ್ಯದ ಅವಧಿಯಲ್ಲಿ ನಡೆದ ಭೂ ಸಕ್ರಮೀಕರಣದ 26 ಸಭೆಗಳಲ್ಲಿ ಒಟ್ಟು 1,430 ಅರ್ಜಿದಾರರ ಪೈಕಿ 2,750 ಎಕರೆ 86 ಗುಂಟೆ ಜಮೀನಿನ ಅಕ್ರಮ ಮಂಜೂರಾತಿ ಪ್ರಕ್ರಿಯೆ ಜರುಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಹೇಮಾವತಿ, ಯಗಚಿ, ಜಲಾಶಯ ಯೋಜನೆಯಡಿ ಮುಳುಗಡೆ ಸಂತ್ರಸ್ತ ರೈತರು, ಯೋಧರಿಗೆ ಕಾಯ್ದಿರಿಸಿದ್ದ ಈ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನು ಬೆಂಗಳೂರು ಹಾಗೂ ಬೇರೆ ಬೇರೆ ತಾಲ್ಲೂಕಿನ, ಹೊರಗಿನ ನಿವಾಸಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿಗಳ ನಷ್ಟವುಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮಂಜೂರಾದ ಅರ್ಜಿದಾರರ ಪೈಕಿ 1,260 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗಿದ್ದು, 1,260 ಅರ್ಜಿದಾರರಿಗೆ ಖಾತೆ ಮಾಡಲಾಗಿದೆ. ಇವುಗಳ ಪೈಕಿ ಬಹುತೇಕ ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಭೂ ಮಂಜೂರಾತಿ ಸಮಿತಿ ಅಧ್ಯಕ್ಷ, ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸುಳ್ಳು ದಸ್ತಾವೇಜುಗಳನ್ನು ಸೃಷ್ಟಿಸಿರುವ ಈ ಸರ್ಕಾರಿ ನೌಕರರು ನಂಬಿಕೆ ದ್ರೋಹ ಎಸಗಿರುತ್ತಾರೆ. ಆದ್ದರಿಂದ, ಇವರ ವಿರುದ್ಧ ಐಪಿಸಿ ಸೆಕ್ಷನ್ 468, 465, 464, 420, 471, 120 ಬಿ ಹಾಗೂ 409ರ ಅನ್ವಯ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದುದಾರರು ಕೋರಿದ್ದರು.
(ಕೃಪೆ: ಬಾರ್ & ಬೆಂಚ್)