ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಳೆದ ವಾರವಷ್ಟೇ 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಆಮ್ ಆದ್ಮಿ ಪಾರ್ಟಿಯು 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹಾಗೂ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಬೇರೆಲ್ಲ ಪಕ್ಷಗಳಿಗಿಂತ ಮೊದಲೇ ನಾವು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದೆವು. ನಂತರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೆವು. ಈಗ 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದೇವೆ. ಬೇರೆಲ್ಲ ಪಕ್ಷಗಳಿಗಿಂತ ನಾವು ಮುಂದಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ಆಮ್ ಆದ್ಮಿ ಪಾರ್ಟಿಯು ಜನಸಾಮಾನ್ಯರಿಗೆ ಅವಕಾಶ ನೀಡುತ್ತಿದೆ. ಮೊದಲಪಟ್ಟಿಯಂತೆ ಎರಡನೇ ಪಟ್ಟಿಯಲ್ಲಿ ಕೂಡ ಅಭ್ಯರ್ಥಿಗಳ ಸರಾಸರಿ ವಯಸ್ಸು 45 ದಾಟಿಲ್ಲ. ಎರಡು ಪಟ್ಟಿಯಲ್ಲಿ ಒಟ್ಟು 14 ರೈತರಿಗೆ, 11 ಮಹಿಳೆಯರಿಗೆ, 18 ವಕೀಲರು, 6 ವೈದ್ಯರು, 23 ಇಂಜಿನಿಯರ್’ಗಳು ಹಾಗೂ 4 ಐಟಿ ವೃತ್ತಿಪರರು ಹಾಗೂ ಐದು ಮಂದಿ ಡಾಕ್ಟರೇಟ್ ಪಡೆದವರು ಇದ್ದಾರೆ. 29 ಜನರ ಸ್ನಾತಕೋತ್ತರ ಪದವೀಧರರು, 68 ಪದವೀಧರರು, 6 ಎಂಬಿಎ ಪದವೀಧರರನ್ನು ಈ ಎರಡು ಪಟ್ಟಿಗಳು ಒಳಗೊಂಡಿವೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ರಾಜ್ಯ ಉಪಾಧ್ಯಕ್ಷರಾದ ವಿಜಯ್ ಶರ್ಮ ಹಾಗೂ ವಕ್ತಾರರಾದ ಉಷಾ ಮೋಹನ್ ಭಾಗವಹಿಸಿದ್ದರು.