ಭೋಪಾಲ್: ಮಧ್ಯಪ್ರದೇಶದ ಖರ್ಗೋನ್’ನಲ್ಲಿ ರಾಮನವಮಿ ಸಂದರ್ಭದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಬ್ಯಾನರ್’ಗಳು ಕಾಣಿಸಿಕೊಂಡು ಜನರನ್ನು ಉದ್ವಿಗ್ನತೆಗೆ ದೂಡಿದೆ. ಬ್ಯಾನರ್’ನಲ್ಲಿ ಜೈ ಹಿಂದೂ ರಾಷ್ಟ್ರ ಎಂದು ಬರೆಯಲಾಗಿದೆ. ಕಳೆದ ವರ್ಷ ಇದೇ ಬ್ಯಾನರ್ ಮತ್ತು ಹಿಂದುತ್ವದವರ ಮೆರವಣಿಗೆಯು ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು.
ಎರಡು ಸ್ಥಳಗಳಲ್ಲಿ ತಲಾಬ್ ಚೌಕ ಮತ್ತು ಸರಾಫಾ ಬಜಾರ್ ಎಂಬಲ್ಲಿ ತಲಾ ಎರಡರಂತೆ ನಾಲ್ಕು ಬ್ಯಾನರ್’ಗಳನ್ನು ಹಾಕಲಾಗಿದೆ. ಇದು ಸಂವಿಧಾನ ವಿರೋಧಿ ಮತ್ತು ಪ್ರಚೋದಕ ಎಂದು ಮುಸ್ಲಿಂ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ತಲಾಬ್ ಚೌಕದಲ್ಲಿ ಮುಸ್ಲಿಮ್ ವ್ಯಕ್ತಿಯ ಹತ್ಯೆಯಾದುದಲ್ಲದೆ ಹಿಂಸಾಚಾರದಲ್ಲಿ ಈ ಪ್ರದೇಶ ತೀವ್ರವಾದ ಹೊಡೆತ ತಿಂದಿತ್ತು. ಗಲಾಟೆಯ ಬಳಿಕ ಪೊಲೀಸರು ಕರ್ಫ್ಯೂ ವಿಧಿಸಿ ಮುಸ್ಲಿಮರ ಮನೆ ಮತ್ತು ಅಂಗಡಿಗಳ ಮೇಲೆ ಬುಲ್ಡೋಜರ್ ಓಡಿಸಿದ್ದರು.
ಖರ್ಗೋನ್ ಶಾಸಕ ರವಿ ಜೋಶಿಯವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಬ್ಯಾನರ್’ಗಳ ಬಗ್ಗೆ ಏನೂ ಹೇಳುವುದಕ್ಕೆ ಇಲ್ಲ. ಆದರೆ ರಾಮ ನವಮಿ ಆಚರಣೆ ಶಾಂತಿಯಿಂದ ಆಗಬೇಕು, ಗಲಭೆ ಸಲ್ಲ ಎಂದು ಎಲ್ಲರಿಗೂ ಎಚ್ಚರಿಕೆ ನೀಡಿದ್ದೇನೆ ಎಂದರು.
“ನಾನು ಪೊಲೀಸ್ ಸೂಪರಿನ್ ಟೆಂಡೆಂಟ್ ಮತ್ತು ಜಿಲ್ಲಾ ಕಲೆಕ್ಟರ್ ಜೊತೆ ಮಾತನಾಡಿದ್ದೇನೆ. ಕಳೆದ ವರ್ಷದ ಗಲಭೆ ಗಮನದಲ್ಲಿಟ್ಟುಕೊಂಡು ಈ ಬಾರಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮೆರವಣೆಗೆ, ರಾಮನವಮಿ ಆಚರಣೆ ಶಾಂತಿಯಿಂದ ಇರುತ್ತದೆ. ಕಳೆದ ಬಾರಿಯ ಅನಾಹುತ ಆಗುವುದಿಲ್ಲ” ಎಂದು ಜೋಶಿ ಹೇಳಿದರು.
ಖರ್ಗೋನ್ ನಲ್ಲಿ ತಲಾಬ್ ಚೌಕವು ಸೂಕ್ಷ್ಮ ಪ್ರದೇಶವಾಗಿದ್ದು ಕಳೆದ ವರ್ಷ ರಾಮ ನವಮಿ ಮೆರವಣಿಗೆ ಇಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು.
ತಲಾಬ್ ಚೌಕದ ಪೊಲೀಸ್ ಠಾಣೆ ತುಂಬ ಕೇಸರಿ ಬಾವುಟಗಳೇ ತುಂಬಿ ಹೋಗಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಬಹುತ್ವ ಹಿಂದುತ್ವದ ಧ್ಯೋತಕ ಎಂದು ಹೇಳಲಾಗಿದೆ.
“ಪೊಲೀಸರು ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದಾರೆ. ಶಾಂತಿ ಕಾಪಾಡುವ ಜವಾಬ್ದಾರಿಯನ್ನು ಆಡಳಿತ ವಹಿಸಿಕೊಂಡಿದೆ. ನಾನು ಅವರಿಗೆಲ್ಲ ಚಟುವಟಿಕೆಯಿಂದಿದ್ದು, ಶಾಂತಿ ಕಾಪಾಡಲು ಹೇಳಿ ಆಶ್ವಾಸನೆ ಪಡೆದಿದ್ದೇನೆ” ಎಂದೂ ಜೋಸಿ ತಿಳಿಸಿದರು.
ಜಿಲ್ಲಾ ಕಲೆಕ್ಟರ್ ಶಿವರಾಜ್ ಸಿಂಗ್ ವರ್ಮಾರನ್ನು ಸಂಪರ್ಕಿಸಿದಾಗ ಅವರು ಈ ಪ್ರಶ್ನೆಯಿಂದ ಗಲಿಬಿಲಿಗೊಂಡು ಕೂಡಲೆ ಫೋನ್ ಇಟ್ಟುಬಿಟ್ಟಿದ್ದಾರೆ.
“ಖರ್ಗೋನ್ ಉದ್ವಿಗ್ನತೆಯಲ್ಲಿರುವುದು ನಿಜ. ಆದರೆ ಸಾಕಷ್ಟು ಜನರು ಏನೇನೋ ಕತೆ ಕಟ್ಟಿ ಹಳೆಯ ಫೋಟೋಗಳೊಡನೆ ಜಾಲ ತಾಣ ಕಲಕುತ್ತಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ. ಕಳೆದ ವರುಷದ ಘಟನೆಯೂ ಜನರನ್ನು ಕಾಡಿದೆ” ಎಂದು ಎಸ್ ಪಿ ಧರ್ಮವೀರ್ ಸಿಂಗ್ ಹೇಳಿದರು.
“ಈ ಜನರಿಗೆ ಖರ್ಗೋನ್ ಬಗ್ಗೆ ಏನೇನೂ ಗೊತ್ತಿಲ್ಲ. ಆದರೆ ಏನೇನನ್ನೋ ಹುಟ್ಟಿಸಿ ದುರುದ್ದೇಶದಿಂದ ಅವುಗಳನ್ನು ಜಾಲತಾಣದಲ್ಲಿ ವೈರಲ್ ಮಾಡಿಸುತ್ತಿದ್ದಾರೆ” ಎಂದೂ ಅವರು ಹೇಳಿದರು.
“ಹಲವಾರು ಮೊಕದ್ದಮೆಗಳು ಇನ್ನೂ ಬಾಕಿ ಉಳಿದಿವೆ. ಹಲವು ಜನರು ಇನ್ನೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಕಳೆದ ವರುಷದ ಘಟನೆಯಿಂದ ತಿಳಿದ ಪ್ರಕಾರ ನಾನು ಎಸ್ ಪಿ ಕೇಳಿಕೊಳ್ಳುತ್ತೇನೆ, ಯಾರೂ ಅಂತಹ ಜಾಲತಾಣ ಪೋಸ್ಟ್ ಗಳನ್ನು ಫಾಲೋ ಮಾಡಬೇಡಿ” ಎಂದೂ ಅವರು ತಿಳಿಸಿದರು.