ನವದೆಹಲಿ: ಲಕ್ಷದ್ವೀಪ ಸಂಸದ ಪಿ ಪಿ ಮುಹಮ್ಮದ್ ಫೈಝಲ್ ಅವರಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜನವರಿ 25 ರಂದು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸದಸ್ಯತ್ವದ ಅನರ್ಹತೆಯನ್ನು ಲೋಕಸಭಾ ಸೆಕ್ರೆಟರಿಯೇಟ್ ಹಿಂಪಡೆದಿದ್ದು, ಈ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಿದೆ.
ವಿಶೇಷವೆಂದರೆ, ತನ್ನ ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರೂ ತನ್ನ ಅನರ್ಹತೆಯನ್ನು ಹಿಂಪಡೆದುಕೊಳ್ಳಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಎನ್ ಸಿಪಿ ಸಂಸದ ಫೈಝಲ್ ಸಲ್ಲಿಸಿದ ಅರ್ಜಿಯು ಇಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಬರುವ ಮೊದಲೇ ಲೋಕಸಭಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಈ ವಿಷಯ ಇಂದು ಪಟ್ಟಿ ಮಾಡಲಾಗಿದೆ.
2009ರ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಸೆಷನ್ಸ್ ನ್ಯಾಯಾಲಯವು ಜನವರಿ 11, 2023 ರಂದು ಎನ್ ಸಿಪಿ ಸಂಸದ ಮತ್ತು ಇತರ ಮೂವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಗೊಳಗಾದ ನಂತರ, ದ್ವೀಪದಿಂದ ಎರಡು ಬಾರಿ ಸಂಸದರಾಗಿದ್ದ ಫೈಝಲ್ ಅವರನ್ನು ಅನರ್ಹಗೊಳಿಸಲಾಯಿತು ಮತ್ತು ಭಾರತದ ಚುನಾವಣಾ ಆಯೋಗವು ಉಪಚುನಾವಣೆಯನ್ನು ಘೋಷಿಸಿತ್ತು. ಈ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಲಕ್ಷದ್ವೀಪದ ಸಂಸದರಾದ ಫೈಝಲ್ ಅವರು ಸೆಶನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಕೇರಳ ಹೈಕೋರ್ಟಿಗೆ ಹೋಗಿದ್ದರು. ಅವರಿಗಾದ ಶಿಕ್ಷೆಯನ್ನು ಕೇರಳ ಉಚ್ಚ ನ್ಯಾಯಾಲಯವು ಜನವರಿಯಲ್ಲಿ ತಡೆದಿತ್ತು. 1951ರ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಫೈಝಲ್’ರನ್ನು ಅನರ್ಹಗೊಳಿಸಲಾಗಿತ್ತು. ಈಗ ಸದಸ್ಯತ್ವ ಮರು ಸ್ಥಾಪಿಸಲಾಗಿದೆ.
ಫೈಝಲ್ ಅವರು ಈ ವಿಷಯವನ್ನು ಸುಪ್ರೀಂ ಕೋರ್ಟಿನಲ್ಲಿ ಕೂಡ ಪ್ರಶ್ನಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಅದರ ವಿಚಾರಣೆ ಬಂದುದರಿಂದ ಅದಕ್ಕೆ ಮೊದಲು ಅವರ ಸಂಸದ ಸ್ಥಾನವನ್ನು ಮರು ಸ್ಥಾಪಿಸಲಾಗಿದೆ.
“ಕೇರಳ ಹೈಕೋರ್ಟ್ ಜನವರಿ 25ರಂದು ಶಿಕ್ಷೆಗೆ ತಡೆ ವಿಧಿಸಿದಾಗಲೇ ಅನರ್ಹತೆ ಹಿಂತೆಗೆದುಕೊಳ್ಳಬೇಕಿತ್ತು. ತಡವಾದರೂ ಇದನ್ನು ಸ್ವಾಗತಿಸೋಣ” ಎಂದು ಎನ್ ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಪ್ರತಿಕ್ರಯಿಸಿದ್ದಾರೆ.
ಜನವರಿ 13ರಂದು ಫೈಝಲ್’ರನ್ನು ಲೋಕ ಸಭಾ ಸ್ಥಾನದಿಂದ ಅನರ್ಹರನ್ನಾಗಿಸಲಾಗಿತ್ತು. ಅವರ ಜೊತೆಗೆ ಇನ್ನೂ ಮೂವರಿಗೆ ಸೆಶನ್ಸ್ ಕೋರ್ಟ್ ಶಿಕ್ಷೆ ವಿಧಿಸಿತ್ತು ಹಾಗೂ ಪ್ರತಿಯೊಬ್ಬರಿಗೂ ತಲಾ ಒಂದು ಲಕ್ಷ ದಂಡ ವಿಧಿಸಿತ್ತು. 2009ರ ಲೋಕಸಭಾ ಚುನಾವಣೆ ಕಾಲದಲ್ಲಿ ಕೇಂದ್ರ ಮಂತ್ರಿಯಾಗಿದ್ದ ಪಿ. ಎಂ. ಸಯೀದ್ ಅವರ ಅಳಿಯ ಮುಹಮ್ಮದ್ ಸಲೀಹ್ ಅವರ ಕೊಲೆ ಯತ್ನದ ಮೊಕದ್ದಮೆಯಿದು.
ಜನವರಿ 30ರಂದು ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾದ ಎನ್ ಸಿಪಿ ಸರ್ವೋಚ್ಚ ನಾಯಕ ಶರದ್ ಪವಾರ್ ಅವರು ಎರಡು ಬಾರಿಯ ಸಂಸದ ಫೈಝಲ್ ಅನರ್ಹತೆಯನ್ನು ಕೂಡಲೆ ಹಿಂತೆಗೆದುಕೊಳ್ಳುವಂತೆ ಹೇಳಿದ್ದರು.
ಜನವರಿ 18ರಂದು ಚುನಾವಣಾ ಆಯೋಗವು ಲಕ್ಷದ್ವೀಪಕ್ಕೆ ಉಪ ಚುನಾವಣೆ ಘೋಷಿಸಿತ್ತು. ಆಮೇಲೆ ಜನವರಿ 30ರಂದು ಅದನ್ನು ಹಿಂಪಡೆದುಕೊಂಡಿತು.