ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

Prasthutha|

ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗ ಇಂದು(ಮಾರ್ಚ್​ 29) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ.

- Advertisement -

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಇಂದು ಬೆಳಗ್ಗೆ 11.30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನದ ದಿನಾಂಕ, ಫಲಿತಾಂಶದ ದಿನಾಂಕದ​ ಜೊತೆಗೆ ನೀತಿ ಸಂಹಿತೆ ಬಗ್ಗೆ ವಿವರಣೆ ನೀಡಲಿದ್ದಾರೆ.

2018 ರ ವಿಧಾನಸಭಾ ಚುನಾವಣೆಯು ಮೇ 12, 2018 ರಂದು ನಡೆದಿತ್ತು. ಮತ್ತು ಪ್ರಸ್ತುತ ವಿಧಾನಸಭೆಯ ಅವಧಿಯು ಮೇ 24, 2023 ರಂದು ಮುಕ್ತಾಯಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಲಿದೆ. ವೇಳಾಪಟ್ಟಿ ಪ್ರಕಟವಾದ ನಂತರ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.

- Advertisement -

ಚುನಾವಣಾ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗವು ಇತ್ತೀಚೆಗೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿತ್ತು. ಚುನಾವಣಾ ಕಾರ್ಯದಲ್ಲಿ ತೊಡಗಿರುವ ಎಲ್ಲ ಅಧಿಕಾರಿಗಳ ವರ್ಗಾವಣೆಯನ್ನು ನಿಲ್ಲಿಸುವಂತೆಯೂ ಇಸಿಐ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಈ ತಿಂಗಳ ಆರಂಭದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಕರ್ನಾಟಕಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದ್ದರು.



Join Whatsapp