ನವದೆಹಲಿ: ಜಾಮಿಯಾ ಗಲಭೆ ಆರೋಪಿಗಳಾದ ಶಾರ್ಜಿಲ್ ಇಮಾಮ್, ಸಫೂರ ಝರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ ಎಂಟು ಮಂದಿ ಬಿಡುಗಡೆಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ತಡೆದ ದಿಲ್ಲಿ ಹೈಕೋರ್ಟ್, ಹಿಂಸೆ ಸಹಿಸಲಾಗದು, ಪೋಲೀಸರ ವಾದವನ್ನು ಕೇಳಬೇಕಾಗುತ್ತದೆ ಎಂದು ಹೇಳಿದೆ. ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಇನ್ನಷ್ಟು ವಿಧಿಗಳಡಿ ಮೊಕದ್ದೆಮೆ ಹೂಡಿರುವುದನ್ನು ಪುರಸ್ಕರಿಸಿದೆ.
2019ರ ಜಾಮಿಯಾ ಗಲಭೆ ಮೊಕದ್ದಮೆ ಆರೋಪಿಗಳ ಬಿಡುಗಡೆಗೆ ಟ್ರಯಲ್ ಕೋರ್ಟ್ ಆದೇಶ ನೀಡಿದ್ದನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಮತ್ತಷ್ಟು ಆರೋಪಗಳೊಡನೆ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಶಾಂತ ರೀತಿಯಿಂದ ಸಕಾರಣದಿಂದ ಕೂಡುವುದಕ್ಕೆ ಯಾವುದೇ ಅಡೆ ತಡೆ ಇರುವುದಿಲ್ಲ. ಹಿಂಸೆ ಮತ್ತು ಹಿಂಸಾತ್ಮಕ ಮಾತಿಗೆ ಅವಕಾಶವಿಲ್ಲ. ಅದಕ್ಕೆ ರಕ್ಷಣೆಯೂ ಸಿಗುವುದಿಲ್ಲ ಎಂದು ಜಸ್ಟಿಸ್ ಸ್ವರಣ ಕಾಂತ ಶರ್ಮಾ ಹೇಳಿದರು.
“ವೀಡಿಯೋದಲ್ಲಿ ಕಾಣುವಂತೆ ಈ ಆರೋಪಿಗಳು ಗಲಭೆಯ ಎದುರುಗಡೆಯಲ್ಲಿ ಇದ್ದರು. ಅವರು ದಿಲ್ಲಿ ಪೊಲೀಸ್ ಮುರ್ದಾಬಾದ್ ಎಂದು ಕೂಗುತ್ತ ಬ್ಯಾರಿಕೇಡ್’ಗಳನ್ನು ನೂಕುವುದು ಕಾಣಿಸುತ್ತಿದೆ ಎಂದು ಕೆಲವು ಆರೋಪಿಗಳ ಹೆಸರುಗಳ ಸಹಿತ ಕೋರ್ಟ್ ಹೇಳಿದೆ.
ಎರಡು ಗಂಟೆಗಳ ಕಾಲ ವಿಚಾರಣೆ ಮಾರ್ಚ್ 23ರಂದು ನಡೆದಾಗ ದಿಲ್ಲಿ ಪೊಲೀಸರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ತಮ್ಮ ವಾದ ಮಂಡಿಸಿದ್ದರು.
ಆದೇಶದ ಪ್ರತಿ ಇನ್ನಷ್ಟೆ ಹೊರಬರಬೇಕಾಗಿದೆ.
ಫೆಬ್ರವರಿ 4ರಂದು ಟ್ರಯಲ್ ಕೋರ್ಟ್ ಶಾರ್ಜಿಲ್ ಇಮಾಮ್, ಆಸಿಫ್ ಇಕ್ಬಾಲ್ ತನ್ಹಾ, ಸಫೂರ ಜರ್ಗರ್, ಮುಹಮದ್ ಅಬೂಝರ್, ಮುಹಮದ್ ಸುಹೈಬ್, ಮುಹಮದ್ ಅನ್ವರ್, ಮುಹಮದ್ ಖಾಸಿಂ, ಮುಹಮದ್ ಬಿಲಾಲ್ ನದೀಂ, ಸಹಜರ್ ರಾಜಾ ಖಾನ್, ಚಂದಾ ಯಾದವ್ ಅವರನ್ನು ಈ ಮೊಕದ್ದಮೆಯಲ್ಲಿ ಬಿಡುಗಡೆ ಮಾಡಿತ್ತು. ಮುಹಮ್ಮದ್ದ್ ಇಲ್ಯಾಸ್ ಬಗ್ಗೆ ಕೂಡ ಸರಿಯಾದ ಸಾಕ್ಷ್ಯ ದೊರೆತಿದ್ದು, ಮೊಕದ್ದಮೆಯಲ್ಲಿ ಸೇರಿಸಲಾಗಿದೆ.
ಬಿಡುಗಡೆಯಾದ ಬಳಿಕ ಪೊಲೀಸರ ಬಿಡುಗಡೆ ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಬಂದಿದ್ದರು.
2019ರ ಡಿಸೆಂಬರ್ ನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಗಲಭೆ ಸಂಬಂಧದ ಪ್ರಕರಣ ಇದಾಗಿದೆ. ಗಲಭೆ ಮತ್ತು ಕಾನೂನು ಬಾಹಿರವಾಗಿ ಜನ ಜಮಾವಣೆ ಆರೋಪ ಹೊರಿಸಿ ಐಪಿಸಿ ಸೆಕ್ಷನ್ ಗಳಾದ 143, 147, 148, 149, 186, 353, 332, 333, 308, 427, 435, 323, 341, 120ಬಿ, 34ಗಳ ಅಡಿ ಎಫ್’ಐಆರ್ ದಾಖಲಿಸಲಾಗಿದೆ.
2020ರ ಏಪ್ರಿಲ್ 21ರಂದು ಪೊಲೀಸರು ಮುಹಮದ್ ಇಲ್ಯಾಸ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅನಂತರ ಇತರ 11 ಮಂದಿಯ ವಿರುದ್ಧ ಎರಡನೆಯ ಸಪ್ಲಿಮೆಂಟರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಇತ್ತೀಚೆಗೆ ಹೆಚ್ಚಿನ ವಾದ ಮಂಡನೆಗಾಗಿ ಫೆಬ್ರವರಿ 1, 2023ರಲ್ಲಿ ಮೂರನೆಯ ಸಪ್ಲಿಮೆಂಟರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕೆಲವು ಫೋಟೋಗಳ ಮೇಲೆ ಆರೋಪಿಗಳನ್ನು ಸಾಕ್ಷಿದಾರರು ಗುರುತಿಸಿದ್ದಾಗಿ ಪ್ರಾಸಿಕ್ಯೂಶನ್ ಪರ ವಾದಿಸಲಾಗಿತ್ತು.