ಚಿಕ್ಕಮಗಳೂರು : ಪ್ರತಿಪಕ್ಷಗಳ ವಿರೋಧದ ನಡುವೆಯೂ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದ ವಿವಾದಾತ್ಮಕ ಗೋಹತ್ಯೆ ನಿಷೇಧ ಕಾನೂನಿನಡಿ ಮೊದಲ ಪ್ರಕರಣ ಚಿಕ್ಕಮಗಳೂರಿನಲ್ಲಿ ದಾಖಲಾಗಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನಿಂದ ಮಂಗಳೂರಿಗೆ ಶೃಂಗೇರಿ ಮಾರ್ಗವಾಗಿ ಶುಕ್ರವಾರ ಬೆಳಗ್ಗಿನ ಜಾವ ಎರಡು ಕಂಟೇನರ್ ಗಳಲ್ಲಿ ಸಾಗಣೆ ಮಾಡುತ್ತಿದ್ದ 34 ಜಾನುವಾರುಗಳನ್ನು ಇಲ್ಲಿ ತನಿಕೋಡು ಚೆಕ್ ಪೋಸ್ಟ್ ಬಳಿ ಯುವಕರ ಗುಂಪು ತಡೆದಿದೆ ಈ ವೇಳೆ ಒಬ್ಬ ಚಾಲಕ ಪರಾರಿಯಾಗಿದ್ದು, ಮತ್ತೊಬ್ಬ ಚಾಲಕನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ. ಇದೀಗ ಇಬ್ಬರು ಕಂಟೇನರ್ ಚಾಲಕರ ವಿರುದ್ಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಟೇನರ್ ಸಮೇತ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೊಳಗಾದ ಅಬಿದ್ ಅಲಿಯನ್ನು ಶೃಂಗೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸದಾಗಿ ತಿದ್ದುಪಡಿಗೊಂಡ ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿ ಇದೇ ಮೊದಲ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ ಈ ಪ್ರಕರಣದಲ್ಲಿ 3ರಿಂದ ಏಳು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ಯಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ.