ಮಹಾತ್ಮಾ ಗಾಂಧೀಜಿ ತತ್ವಕ್ಕೆ ತಿಲಾಂಜಲಿ, ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಅಮೆರಿಕ ಕಾಂಗ್ರೆಸ್ ಸಂಸದ

Prasthutha|

ವಾಷಿಂಗ್ಟನ್: ಭಾರತದ ಕಾಂಗ್ರೆಸ್ಸಿನ ಹಿರಿಯ ಜನಪ್ರತಿನಿಧಿಯಾದ ರಾಹುಲ್ ಗಾಂಧಿಯವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಮಹಾತ್ಮಾ ಗಾಂಧೀಜಿಯವರ ತತ್ವಗಳ ಬೆನ್ನಿಗೆ ಚೂರಿ ಹಾಕಿರುವ ಕೃತ್ಯವಾಗಿದೆ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ ಸಂಸದರು ಟೀಕಿಸಿದ್ದಾರೆ.
ಮಾನಹಾನಿ ಖಟ್ಲೆಯೊಂದರ ಸಂಬಂಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಸೂರತ್ ಕೋರ್ಟ್ ಶಿಕ್ಷೆಗೊಳಪಡಿಸಿದ 24 ಗಂಟೆಗಳ ಒಳಗೆ ಅವರನ್ನು ಸಂಸದ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
“ರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದು ಮಹಾತ್ಮಾ ಗಾಂಧೀಜಿಯವರ ತತ್ವಗಳಿಗೆ ಮತ್ತು ಭಾರತದ ಪ್ರಜಾಪ್ರಭುತ್ವದ ತತ್ವಗಳಿಗೆ ಮಾಡಿರುವ ದೊಡ್ಡ ವಂಚನೆಯಾಗಿದೆ” ಎಂದು ಭಾರತೀಯ ಮೂಲದ ಯುಎಸ್’ಎ ಕಾಂಗ್ರೆಸ್ಸಿಗ ರೋ ಖನ್ನಾ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
“ನನ್ನ ಅಜ್ಜ ಹಲವಾರು ವರ್ಷ ಜೈಲಿನಲ್ಲಿ ಕಳೆದ ಬಲಿದಾನದ ಮೌಲ್ಯಗಳಿಗೆ ಇದು ಸರಿಯಲ್ಲ ಎಂದು ಯುಎಸ್’ಎ ಜನಪ್ರತಿನಿಧಿ ಸಭೆಯ ಸಿಲಿಕಾನ್ ವ್ಯಾಲಿ ಸಂಸದರಾದ ರೋ ಖನ್ನಾ ಹೇಳಿದರು.
ಭಾರತ- ಯುಎಸ್’ಎ ಕಾಂಗ್ರೆಸ್ ಕೂಟದ ಸಹ ಅಧ್ಯಕ್ಷರೂ ಆಗಿರುವ ಖನ್ನಾ ಅವರು ಈ ವಿಷಯದಲ್ಲಿ ಪ್ರಧಾನಿ ಮೋದಿಯವರು ಕೂಡಲೆ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
“ಭಾರತದ ಪ್ರಜಾಪ್ರಭುತ್ವಕ್ಕಾಗಿ ಈ ನಿರ್ಣಯ ತೆಗೆದುಹಾಕುವ ಅಧಿಕಾರ ನಿಮಗಿದೆ” ಎಂದೂ ಖನ್ನಾ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಾಲ್ಕು ಅವಧಿಯ ಸಂಸದರಾದ 52 ವರ್ಷದ ರಾಹುಲ್ ಗಾಂಧಿಯವರ ಅನರ್ಹತೆಗೆ ಮೇಲಿನ ಕೋರ್ಟ್ ತಡೆ ಕೊಡದಿದ್ದರೆ ಮುಂದಿನ ಎಂಟು ವರ್ಷ ಅವರು ಸ್ಪರ್ಧಿಸಲವಕಾಶವಿಲ್ಲ ಎನ್ನುವುದು ಇಲ್ಲಿರುವ ಸೂಕ್ಷ್ಮ ವಿಷಯವಾಗಿದೆ.
ಯುಎಸ್’ಎ ಅನಿವಾಸಿ ಮತ್ತು ವಿದೇಶಿ ಭಾರತೀಯರ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ಜಾರ್ಜ್ ಅಬ್ರಹಾಂ ಅವರು ರಾಹುಲ್ ಗಾಂಧಿಯವರನ್ನು ಅನರ್ಹರಾಗಿಸಿರುವುದು ಭಾರತದ ಪ್ರಜಾಪ್ರಭುತ್ವದ ವಿಷಾದದ ದಿನವಾಗಿದೆ ಎಂದಿದ್ದಾರೆ.



Join Whatsapp