ಗೌರಿ ಹತ್ಯೆ: ಎರಡು ನಿರ್ದಿಷ್ಟ ವಿಡಿಯೊ ವೀಕ್ಷಿಸಲು ಜೈಲಿನಲ್ಲಿರುವ ಆರೋಪಿಗಳಿಗೆ ಅನುಮತಿಸಿದ ವಿಶೇಷ ನ್ಯಾಯಾಲಯ

Prasthutha|

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ದಿನ ಗೌರಿ ಅವರು ತಮ್ಮ ಮನೆಯ ಹತ್ತಿರ ಬಂದದ್ದು ಮತ್ತು ಆರೋಪಿಯು ಅವರ ಮೇಲೆ ಗುಂಡಿನ ದಾಳಿ ನಡೆಸಿದ ಎರಡು ವಿಡಿಯೊಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳು ವೀಕ್ಷಿಸಲು ಅವಕಾಶ ಮಾಡಿಕೊಂಡುವಂತೆ ಜೈಲಿನ ಅಧಿಕಾರಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ಮಾಡಿದೆ.

- Advertisement -

ಗೌಪ್ಯ ವಿಚಾರಣೆಯ ವೇಳೆ ನಿರ್ದಿಷ್ಟ ಸಿ ಡಿ ವೀಕ್ಷಿಸಲು ಕೋರಿ ಆರೋಪಿಗಳು ಸಲ್ಲಿಸಿದ್ದ ಮೆಮೊವನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರುಳೀಧರ ಪೈ ಬಿ ಅವರು ಮಾನ್ಯ ಮಾಡಿದ್ದಾರೆ.

“ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳಿಗೆ ಗೌರಿ ಹತ್ಯೆಗೆ ಸಂಬಂಧಿಸಿದ ಸಿ ಡಿಯಲ್ಲಿರುವ ಎರಡು ಘಟನಾವಳಿಗಳ ವಿಡಿಯೊಗಳನ್ನು ವೀಕ್ಷಿಸಲು ಸೂಕ್ತ ಸಂದರ್ಭದಲ್ಲಿ ಜೈಲಿನಲ್ಲಿ ಅವಕಾಶ ಮಾಡಿಕೊಡಬೇಕು. ಅಲ್ಲದೇ, ಆರೋಪಿಗಳ ಪರ ವಕೀಲರಾದ ಉಮಾಶಂಕರ್‌ ಮೇಗುಂದಿ ಮತ್ತು ಆರ್‌ ಬಿ ದಿವ್ಯಾ ಅವರು ಗರಿಷ್ಠ 20 ನಿಮಿಷಗಳವರೆಗೆ ಆರೋಪಿಗಳ ಜೊತೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು. ವಕೀಲರು ತಮ್ಮ ಜೊತೆ ಗುರುತಿನ ಚೀಟಿ ಕೊಂಡೊಯ್ಯಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

- Advertisement -

“ಸಿ ಡಿಯಲ್ಲಿನ ವಿಚಾರ ತೋರಿಸಲು ಜೈಲು ಪ್ರಾಧಿಕಾರವು ತಮ್ಮ ಸಿಸ್ಟಂಗಳನ್ನು ಬಳಸಬಹುದು ಅಥವಾ ವಕೀಲರು ಕೊಂಡೊಯ್ಯುವ ಲ್ಯಾಪ್‌ ಟಾಪ್‌ ಬಳಸಲು ಅನುಮತಿಸಬಹುದು. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಮುಂಚಿತವಾಗಿ ಆರೋಪಿಗಳ ವಕೀಲರು ಜೈಲು ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಕಚೇರಿಯು ಈ ಆದೇಶವನ್ನು ಜೈಲು ಪ್ರಾಧಿಕಾರಕ್ಕೆ ತಿಳಿಸಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“2023ರ ಮೇ 8ರಿಂದ 12ರವರೆಗೆ ವಿಚಾರಣೆ ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರಾದ ಬಾಲಕೃಷ್ಣನ್‌ ಅವರು ಮೆಮೊ ಸಲ್ಲಿಸಿದ್ದು, ಸಾಕ್ಷಿಗಳಿಗೆ ಸಮನ್ಸ್‌ ಜಾರಿ ಮಾಡಲು ನ್ಯಾಯಾಲಯವು ಆದೇಶಿಸಿದೆ. ಆರೋಪಿಗಳ ನ್ಯಾಯಾಂಗ ಬಂಧನವನ್ನು ಮೇ 8ರವರೆಗೆ ವಿಸ್ತರಿಸಲಾಗಿದೆ. ಮುಂಬೈ ಮತ್ತು ಪುಣೆ ಜೈಲು ಪ್ರಾಧಿಕಾರಕ್ಕೆ ಮುಂದಿನ ವಿಚಾರಣೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲು ಕಚೇರಿಗೆ ನಿರ್ದೇಶಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್‌ 5ರಂದು ಗೌರಿ ಲಂಕೇಶ್‌ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌’ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.

(ಕೃಪೆ: ಬಾರ್ & ಬೆಂಚ್)



Join Whatsapp