ತಿಗಳ ಸಮುದಾಯಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಟಿಕೆಟ್ ನೀಡಿ: ವಿಶ್ವಕ್ಷತ್ರೀಯ ಮಹಾ ಸಂಸ್ಥಾನ ಒತ್ತಾಯ

Prasthutha|

ಬೆಂಗಳೂರು; ತಿಗಳ ಕ್ಷತ್ರಿಯ ಸಮುದಾಯಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಹೆಚ್ಚಿನ ಅವಕಾಶ ಕಲ್ಪಿಸಬೇಕೆಂದು ವಿಶ್ವಕ್ಷತ್ರೀಯ ಮಹಾ ಸಂಸ್ಥಾನದ ಅಧ್ಯಕ್ಷ ಎಂ.ಡಿ.ಪ್ರಕಾಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಗಳ ಸಮುದಾಯ 19 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನರಿದ್ದಾರೆ. 120 ವಿಧಾನಸಭಾ ಕ್ಷೇತ್ರಗಳಲ್ಲಿ ತಿಗಳ ಕ್ಷತ್ರೀಯ ಮತದಾರರು ನಿರ್ಣಾಯಕವಾಗಿದ್ದಾರೆ. ಮುಖ್ಯವಾಗಿ ರಾಮನಗರ, ತುಮಕೂರು, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ರಾಜಾಜಿನಗರ, ಮಾಲೂರು, ಕೋಲಾರ, ಹೊಸಕೋಟೆ, ಮಾಗಡಿ, ಚನ್ನಪಟ್ಟಣ, ಯಲಹಂಕ, ದಾಸರಹಳ್ಳಿ, ಶಾಂತಿನಗರ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಮಲ್ಲೇಶ್ವರಂ, ಹೆಬ್ಬಾಳ, ರಾಜರಾಜೇಶ್ವರಿನಗರ, ಕನಕಪುರ, ಮಂಡ್ಯ, ಮದ್ದೂರು, ಬೇಲೂರು ಹಾಗೂ ಇತರೆ ಭಾಗಗಳಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ನರೇಂದ್ರ.ಡಿ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಕ್ಷಿಯಾಗಿದ್ದು, ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ರಾಮನಗರ ಯುವಜನ ಪ್ರಾಧಿಕಾರದ ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರಿಗೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರ, ಹೂಡಿ ವಿಜಯ ಕುಮಾರ್ ಅವರಿಗೆ ಮಾಲೂರು ಕ್ಷೇತ್ರದಿಂದ, ಸುಬ್ಬಣ್ಣ ಅವರಿಗೆ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕ್ಷತ್ರೀಯ ಮಹಾ ಸಂಸ್ಥಾನದ ಉಪಾಧ್ಯಕ್ಷ ಎಸ್.ಆರ್. ಮಂಜುನಾಥ್, ಯುವ ಘಟಕದ ಅಧ್ಯಕ್ಷ ಅಕ್ಷಯ್, ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.



Join Whatsapp