ಬೆಂಗಳೂರು: 2022-23 ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯು ರಾಜ್ಯದ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ ಸೇರಿ ಒಟ್ಟು ಆರು ಪ್ರಶಸ್ತಿಗಳಿಗೆ ಭಾಜನವಾಗಿದೆ.
ಮಾರ್ಚ್ 24 ರಂದು ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳ ಪ್ರದಾನವಾಗಲಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿ.ಎಂ.ತಿರ್ಲಾಪುರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಜಿಲ್ಲಾ ಪಂಚಾಯತಿಯು ಅತ್ಯುತ್ತಮ ಜಿಪಂ ಪ್ರಶಸ್ತಿ ಹಾಗೂ 15 ಲಕ್ಷ ನಗದು ಪುರಸ್ಕಾರ, ದೊಡ್ಡಬಳ್ಳಾಪುರ ತಾಪಂ ಅತ್ಯುತ್ತಮ ತಾಪಂ ಪ್ರಶಸ್ತಿ ಹಾಗೂ 10 ಲಕ್ಷ ಪುರಸ್ಕಾರ, ತೂಬಗೆರೆ ಗ್ರಾಮ ಪಂಚಾಯತಿಯು ಅತ್ಯುತ್ತಮ ಗ್ರಾಪಂ ಪ್ರಶಸ್ತಿ ಹಾಗೂ 5 ಲಕ್ಷ ನಗದು ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಜೊತೆಗೆ ಅತ್ಯುತ್ತಮ ಆಡಳಿತ ವಿಭಾಗದಲ್ಲಿ ಬೆಂಗಳೂರು ಜಿಪಂ, ಅತ್ಯುತ್ತಮ ತಾಲೂಕು ಮಟ್ಟದ ರೇಷ್ಮೆ ಇಲಾಖೆ ವಿಭಾಗದಲ್ಲಿ ದೇವನಹಳ್ಳಿ ರೇಷ್ಮೆ ಇಲಾಖೆ ಹಾಗೂ ಜಲಸಂಜೀವಿನಿ ಪಂಚಾಯತಿ ವಿಭಾಗದಲ್ಲಿ ಸಾಸಲು ಗ್ರಾಪಂ ಪ್ರಶಸ್ತಿ ಪಡೆದಿವೆ.
ಪ್ರಶಸ್ತಿಗೆ ನಿಗದಿಪಡಿಸಲಾದ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯತಿಗಳು ಸಲ್ಲಿಸಿದ ಪುಸ್ತಾವನೆಗಳನ್ನು ರಾಜ್ಯ ಮಟ್ಟದ ಆಯ್ಕೆ ಸಮಿತಿಯು ಮೌಲ್ಯಮಾಪನ ಮಾಡಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ.
ಜಿಲ್ಲೆಯು ನರೇಗಾ ಅಡಿ ಉತ್ತಮ ಪ್ರಗತಿ ಸಾಧಿಸಲು ಶ್ರಮಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಪ್ರಶಸ್ತಿಯು ಹೊಸ ಸಂತಸ,ಉತ್ಸಾಹ ಮೂಡಿದೆ.ಸಾಧನೆಗೆ ಕಾರಣವಾದ ತಂಡಕ್ಕೆ ಅಭಿನಂದನೆಗಳು ಎಂದು ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜ ತಿಳಿಸಿದ್ದಾರೆ.