ಮಂಗಳೂರು: ಮಟ್ಕಾ ಜುಗಾರಿ ಅಡ್ಡೆಯ ಮೇಲೆ ಮಂಗಳೂರು ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿ ಜುಗಾರಿ ಆಡಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಮಾಡೂರು ಗ್ರಾಮದ ಕೋಟೆಕಾರು ಬಾಯಾರ್ ತೋಟ ನಿವಾಸಿ ಸುರೇಶ್ ಬಾಬು ಎಂಬವರ ಪುತ್ರ ಪ್ರವೀಣ್ (33), ಕುಡುಪು ನಡುಮನೆ ರಸ್ತೆ ಮನವೀತ್ ವಿಲ್ಲಾ ನಿವಾಸಿ ಮನೋಜ್ ಜಾರ್ಜ್ (43) ಹಾಗೂ ಗೋರಿಗುಡ್ಡೆ ನೆಹರೂ ರಸ್ತೆ ನಿವಾಸಿ ರಾಕೇಶ್ (47) ಬಂಧಿತ ಆರೋಪಿಗಳು.
ಮಂಗಳೂರು ನಗರದ ಜ್ಯೋತಿ ಜಂಕ್ಷನ್ ಹತ್ತಿರದ ಸ್ಮಾರ್ಟ್ ಟವರ್’ನ ನೆಲಮಹಡಿಯಲ್ಲಿರುವ ಮೋನು ಎಂಟರ್ ಪ್ರೈಸಸ್ ಎದುರು ಮಟ್ಕಾ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಿದ್ದಾರೆ. ಈ ವೇಳೆ 3000 ರೂ. ನಗದು, ಜುಗಾರಿಗೆ ಉಪಯೋಗಿಸುತ್ತಿದ್ದ 2 ಸ್ಯಾಮ್ ಸಂಗ್ ಮೊಬೈಲ್’ಗಳು, 2 ಕಂಪ್ಯೂಟರ್, ಆಟಕ್ಕೆ ಬಳಸುತ್ತಿದ್ದ ಪರಿಕರಗಳು ಸೇರಿದಂತೆ ಒಟ್ಟು 75 ಸಾವಿರ ರೂ. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ಅವರ ಮಾರ್ಗದರ್ಶನದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಅಂಶುಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಬಿ.ಪಿ.ಅವರ ನಿರ್ದೇಶನದಂತೆ ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.