ಮಂಗಳೂರು: ಮೂಲಸೌಕರ್ಯಕ್ಕೆ ಒತ್ತಾಯಿಸಿ ಪುತ್ತೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್’ಗಳನ್ನು ಹಾಕಿರುವುದು ಕಂಡುಬಂದಿದೆ.
ಪುತ್ತೂರಿನ ಅಲಂಕಾರ್ ಗ್ರಾಮದ ಕಂಡ್ಲಾಜೆ, ನಗ್ರಿ, ಶರವೂರು ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಉತ್ತಮ ರಸ್ತೆ ಕಲ್ಪಿಸುವಂತೆ ಒತ್ತಾಯಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯ ಬ್ಯಾನರ್ ಹಾಕಿದ್ದಾರೆ.
ಗ್ರಾಮಸ್ಥ ನಿರಂಜನ್ ಎಂಬವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಗ್ರಾಮದ ರಸ್ತೆಗಳು ಡಾಂಬರು ಕಾಣದೆ ಎಷ್ಟೋ ವರ್ಷಗಳಾಗಿವೆ. ಈ ರಸ್ತೆಯಲ್ಲಿ ನಡೆದಾಡಲು ಕೂಡ ಸಾಧ್ಯವಾಗದಂತಾಗಿದೆ. ರಾಜಕಾರಣಿಗಳು ಕೇವಲ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ನಮಗೆ ಉಚಿತ ಕೊಡುಗೆಗಳು ಬೇಡ, ನಮ್ಮ ತೆರಿಗೆ ಹಣದಿಂದ ರಸ್ತೆ ನಿರ್ಮಿಸಿಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಮತದಾನ ಬಹಿಷ್ಕರಿಸುವುದು ಖಚಿತ ಎಂದು ಹೇಳಿದರು.