ನವದೆಹಲಿ: ಸಂಸತ್’ನ ಉಭಯ ಸದನಗಳಲ್ಲಿ ಮಂಗಳವಾರ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ, ಗದ್ದಲ ಮುಂದುವರಿದಿದ್ದರಿಂದ ಕಲಾಪ ಹಲವು ಬಾರಿ ಮುಂದೂಡಲ್ಪಟ್ಟವು.
ಲಂಡನ್ ಮಾತಿನ ಬಗ್ಗೆ ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕು ಎನ್ನುವುದು ಬಿಜೆಪಿಯವರ ಬೇಡಿಕೆಯಾದರೆ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು.
ಸಂಸದರೊಬ್ಬರು ವಿದೇಶಕ್ಕೆ ಹೋಗಿ ದೇಶದ ವಿರುದ್ಧ ಮಾತನಾಡಿ ಬಂದರೆ ಸಂಸತ್ತು ಸುಮ್ಮನೆ ಕುಳಿತುಕೊಳ್ಳಲಾಗದು ಎಂದು ಕೇಂದ್ರ ಮಂತ್ರಿ ಪೀಯೂಶ್ ಗೋಯೆಲ್ ಹೇಳಿದರು.
ಎರಡನೆಯ ದಿನವೂ ರಾಹುಲ್ ಗಾಂಧಿಯವರ ಮಾತಿನ ಮೇಲೆ ಗುರಾಣಿ ಹಿಡಿದ ಬಿಜೆಪಿ, ಕಾಂಗ್ರೆಸ್ ಸದಸ್ಯರು ಕಲಾಪ ನಡೆಯಲು ಬಿಡಲಿಲ್ಲ.
ಲಂಡನ್ನಿನಲ್ಲಿ ವಯನಾಡ್ ಸಂಸದರಾದ ರಾಹುಲ್ ಗಾಂಧಿಯವರು ಭಾರತದ ಸಾಂವಿಧಾನಿಕ ಸಂಸ್ಥೆಗಳು ದಾಳಿಗೆ ಸಿಕ್ಕಿವೆ ಮತ್ತು ಭಾರತದ ಪ್ರಜಾಪ್ರಭುತ್ವ ಮುಳುಗುತ್ತಿದೆ ಎಂದು ಹೇಳಿದ್ದರು.
ಬಿಜೆಪಿಗೆ ದನಿಯೇರಿಕೆಗೆ ದನಿಯೇರಿಸಿದ ಕಾಂಗ್ರೆಸ್ಸಿಗರು ಬೀಳುತ್ತಿರುವ ಪ್ರಜಾಪ್ರಭುತ್ವವನ್ನು ಈಗ ರಕ್ಷಿಸಬೇಕಾಗಿದೆ ಎಂದು ವಾದಿಸತೊಡಗಿದರು.
ಸಂಸತ್ ಕಲಾಪಕ್ಕೆ ಮೊದಲು ಪ್ರಧಾನಿಯವರನ್ನು ಭೇಟಿಯಾದ ಮಂತ್ರಿಗಳಾದ ಪ್ರಹ್ಲಾದ ಜೋಶಿ, ಅನುರಾಗ್ ಠಾಕೂರ್, ಪೀಯೂಶ್ ಗೋಯಲ್, ನಿತಿನ್ ಗಡ್ಕರಿ, ಕಿರಣ್ ರಿಜಿಜು ಅವರು ರಾಹುಲ್ ಗಾಂಧಿಯವರನ್ನು ಖಂಡಿಸಲು ತಯಾರಾಗಿ ಬಂದಿದ್ದರು.
“ನಾವು ಎಲ್ಲವನ್ನೂ ನೋಡುತ್ತ ಸುಮ್ಮನೆ ಕೂರುವುದು ಸಾಧ್ಯವಿಲ್ಲ. ಒಬ್ಬ ಸದಸ್ಯರು ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಾರೆ. ಕೆಲವು ಪಕ್ಷಗಳ ಅವರನ್ನು ಬೆಂಬಲಿಸುತ್ತಿರುವುದು ನನಗೆ ದಿಗ್ಭ್ರಮೆ ತಂದಿದೆ. ಹಿರಿಯ ಸಂಸದರೊಬ್ಬರು ಭಾರತವನ್ನು ಹೀಗೆ ಅವಮಾನಿಸಿದ್ದು ಸರಿಯಲ್ಲ” ಎಂದು ಸಚಿವ ಗೋಯಲ್ ರಾಜ್ಯ ಸಭೆಯಲ್ಲೂ ಹೇಳಿದರು.
“ಪ್ರಜಾಪ್ರಭುತ್ವದ ಮೇಲೆ ದಾಳಿ ಎನ್ನುತ್ತಿದ್ದಾರೆ. 1984ರಲ್ಲಿ ಸಾವಿರಾರು ಸಿಖ್ಖರ ಮಾರಣ ಹೋಮ ನಡೆಯಿತಲ್ಲ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆ ಜವಾಬುದಾರಿಗಳಿಂದ ಜಾರಿಕೊಂಡರು” ಎಂದು ಅನುರಾಗ್ ಠಾಕೂರ್ ಹೇಳಿದರು.
ಕಾಂಗ್ರೆಸ್ ಸಂಸದ ಶಕ್ತಿ ಸಿನ್ಹಾ ಗೋಹಿಲ್ ಅವರು ಮಂತ್ರಿ ಗೋಯೆಲ್ ವಿರುದ್ಧ ಹಕ್ಕು ಚ್ಯುತಿ ನೋಟೀಸಿಗೆ ಪ್ರಯತ್ನಿಸಿದರು. ಗೋಯೆಲ್ ಆಧಾರವಿಲ್ಲದೆ ಮಾತನಾಡುತ್ತಿದ್ದಾರೆ ಎಂದರು. ಅಷ್ಟರಲ್ಲಿ ಎರಡೂ ಮನೆಗಳು ಮುಂದೂಡಲ್ಪಟ್ಟವು.