ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಲ್ಲಿನ ಸಂಸತ್ ಭವನದೊಳಗೆ ನುಗ್ಗಿ ದಾಂಧಲೆ ನಡೆಸಿದ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಟ್ರಂಪ್ ಬೆಂಬಲಿಗರ ಈ ಹಿಂಸಾತ್ಮಕ ಗಲಭೆಯ ಹಿನ್ನೆಲೆಯಲ್ಲಿ ವಾಷಿಂಗ್ಟನ್ ನಲ್ಲಿ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಗಿದೆ.
ವಾಷಿಂಗ್ಟನ್ ನಲ್ಲಿರುವ ಕ್ಯಾಪಿಟಲ್ ಕಟ್ಟಡದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂಬುದನ್ನು ಅಲ್ಲಿನ ಪೊಲೀಸ್ ಮುಖ್ಯಸ್ಥ ರಾಬರ್ಟ್ ಕಾಂಟೀ ಹೇಳಿದ್ದಾರೆ.
ಮೃತರಲ್ಲಿ ಓರ್ವ ಮಹಿಳೆ ಮತ್ತು ಮೂವರು ಪುರುಷರು ಎನ್ನಲಾಗಿದೆ. ಟ್ರಂಪ್ ಬೆಂಬಲಿಗರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಯಿತಾದರೂ, ದಾಂಧಲೆ ನಡೆಸಲೆಂದೇ ಸಿದ್ದರಾಗಿ ಬಂದುದರಿಂದ ಅವರು ಸಂಸತ್ ಭವನದೊಳಗೆ ನುಗ್ಗಿ ಎಲ್ಲಾ ವಿಕೃತಿಯನ್ನು ಮೆರೆದಿದ್ದಾರೆ. ಕಟ್ಟಡದೊಳಗೆ ಬೆಂಕಿಯನ್ನೂ ಹಚ್ಚಲಾಗಿದೆ.
ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ನುಗ್ಗಿದಾಗ ಪೊಲೀಸರು ಗುಂಪು ಚದುರಿಸಲು ಗುಂಡು ಹಾರಿಸಿದರು. ಈ ವೇಳೆ ಮಹಿಳೆ ಮತ್ತು ಹಲವರಿಗೆ ಗುಂಡೇಟು ತಗುಲಿತ್ತು. ಈ ಪೈಕಿ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕೆಲವರಲ್ಲಿ ಪೈಪ್ ಬಾಂಬ್ ಗಳಿದ್ದುದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ಈಗಾಗಲೇ ಕರ್ಫ್ಯೂ ವಿಧಿಸಲಾಗಿದ್ದು, ಕರ್ಫ್ಯೂ ಉಲ್ಲಂಘಿಸಿದ 30 ಮಂದಿಯನ್ನು ಬಂಧಿಸಲಾಗಿದೆ. ಗಲಭೆಗೆ ಸಂಬಂಧಿಸಿ ಒಟ್ಟು 52 ಮಂದಿಯನ್ನು ಇಲ್ಲಿ ವರೆಗೆ ಬಂಧಿಸಲಾಗಿದೆ.