ಬೆಂಗಳೂರು: ಬಿಜೆಪಿ ಸರ್ಕಾರಗಳು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತನ್ನ ಸಾಧನೆಯೆಂದು ಬಿಂಬಿಸಿಕೊಳ್ಳುವುದಾದರೆ, ಟೋಲ್ ರದ್ದುಪಡಿಸಿ ಪೂರ್ತಿ ಹಣವನ್ನು ಸರ್ಕಾರವೇ ಭರಿಸಲಿ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಬೆಂಗಳೂರು-ಮೈಸೂರು ನಡುವೆ ನೂತನವಾಗಿ ನಿರ್ಮಿಸಿರುವ ಹೆದ್ದಾರಿಯನ್ನು ಬಿಜೆಪಿ ನಾಯಕರು ದಶಪಥವೆಂದು ಕರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ದಶಪಥ ಎಂದು ಕರೆಯುವುದನ್ನು ಎಲ್ಲೂ ನಿರಾಕರಣೆ ಮಾಡಿಲ್ಲ. ಆದರೆ ಎನ್ಎಚ್ಎಐ ಹೊರಡಿಸಿರುವ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಆರು ಪಥವೆಂದು ಉಲ್ಲೇಖಿಸಲಾಗಿದೆ. ಹತ್ತು ಪಥವನ್ನು ಆರು ಪಥ ಮಾಡಲಾಗಿದ್ದು, ಉಳಿದ 40% ಪಥಗಳು ಏನಾಯಿತು? ಬಿಜೆಪಿ ಸರ್ಕಾರವು 40% ಕಮಿಷನ್ ಪಡೆಯುವಂತೆ 40% ಪಥಗಳನ್ನು ಕೂಡ ಇಲ್ಲವಾಗಿಸಿದೆ. ಇದು ದಶಪಥವೋ ಆರು ಪಥವೋ ಎಂಬ ಬಗ್ಗೆ ಸರ್ಕಾರ ಹಾಗೂ ಬಿಜೆಪಿ ಸ್ಪಷ್ಟನೆ ನೀಡಬೇಕು” ಎಂದು ಹೇಳಿದರು.
“ಎನ್ಎಚ್ಎಐ ಆಹ್ವಾನ ಪತ್ರಿಕೆಯ ಪ್ರಕಾರ ಬೆಂಗಳೂರಿನಿಂದ ನಿಡಘಟ್ಟ ತನಕ ಮಾತ್ರ ಕಾಮಗಾರಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ 140 ಕಿಲೋಮೀಟರ್ ಇದ್ದು, ಸರ್ಕಾರವು ಕೇವಲ ನಿಡಘಟ್ಟದ ತನಕ 70 ಕಿಲೋಮೀಟರ್ ಮಾತ್ರ ಹೆದ್ದಾರಿ ಮಾಡಿಸಿ ಪ್ರಧಾನಿಯಿಂದ ಉದ್ಘಾಟನೆ ಮಾಡಿಸುವುದು ಎಷ್ಟು ಸರಿ? ಪ್ರಧಾನ ಮಂತ್ರಿಗೆ ಇದು ಶೋಭೆ ತರುತ್ತದೆಯೇ?” ಎಂದು ಪ್ರಶ್ನಿಸಿದರು.
ನಿಡಘಟ್ಟ ಸಮೀಪ ಕಾಮಗಾರಿ ನಡೆಯುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ಮಾಡುವ ತರಾತುರಿ ಪ್ರಧಾನಿಯವರಿಗೆ ಏನಿತ್ತು? ಚುನಾವಣೆಗೆ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಹೊರಟಿದ್ದಾರಾ? ಇದು ಪ್ರಧಾನಿ ಹುದ್ದೆಯ ಶೋಭೆ ಹೆಚ್ಚಿಸುತ್ತದೆಯೋ ಅಥವಾ ಕಡಿಮೆಯಾಗಿಸುತ್ತದೆಯೋ?” ಎಂದು ಪ್ರಶ್ನಿಸಿದರು.
“ನೂತನ ಹೆದ್ದಾರಿಯಲ್ಲಿ ಸಂಚರಿಸಲು 140 ರೂಪಾಯಿ ಟೋಲ್ ಕಟ್ಟಬೇಕಾಗಿದೆ. ಒಂದು ಕಾಲದಲ್ಲಿ ಎರಡು ಪಥವಿದ್ದ ರಸ್ತೆಯನ್ನು ನಾಲ್ಕು ಪಥ ಮಾಡಿದಾಗಿ ಟೋಲ್ ಕಟ್ಟಬೇಕಾಗಿರಲಿಲ್ಲ. ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಿತ್ತು. ಆದರೆ ಈಗ ಆರು ಪಥ ಮಾಡಿದಾಗ 140 ರೂಪಾಯಿ ನೀಡಬೇಕಾಗಿದೆ. ದುಬಾರಿ ಪೆಟ್ರೋಲ್ ಬೆಲೆ ನೀಡುವುದರ ಜೊತೆಗೆ ಟೋಲ್ ಶುಲ್ಕವನ್ನೂ ಪಾವತಿಸಲು ವಾಹನಸವಾರರಿಗೆ ಹೊರೆಯಾಗುತ್ತದೆ. ಆದ್ದರಿಂದ ಟೋಲ್ ರದ್ದುಪಡಿಸಬೇಕು. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ದುಬಾರಿ ಟೋಲ್ ನಿಗದಿಪಡಿಸುವುದಾದರೆ, ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರ ಹೊಗಳಿಕೊಳ್ಳುವುದು ಎಷ್ಟು ಸರಿ? ಗುತ್ತಿಗೆದಾರರು ನಿರ್ಮಿಸುವುದು ಹಾಗೂ ಅದಕ್ಕೆ ವಾಹನ ಸವಾರರು ಹಣ ನೀಡುವುದಾದರೆ ಸರ್ಕಾರಕ್ಕೆ ಏಕೆ ಇಷ್ಟೊಂದು ಪ್ರಚಾರ ಪಡೆಯಬೇಕು? ಸರ್ಕಾರಕ್ಕೆ ತಾಕತ್ತಿದ್ದರೆ ಟೋಲ್ ರದ್ದುಪಡಿಸಿ, ನಂತರವಷ್ಟೇ ಹೆದ್ದಾರಿಯ ನಿರ್ಮಾಣದ ಕ್ರೆಡಿಟ್ ತೆಗೆದುಕೊಳ್ಳಲಿ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“ಪ್ರಧಾನಿ ನರೇಂದ್ರ ಮೋದಿಯವರು ಫೈಟರ್ ರವಿ ಎಂಬ ರೌಡಿ ಶೀಟರ್ಗೆ ನಮಸ್ಕಾರ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಫೈಟರ್ ರವಿ ಏನಾದರೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವನೇ? ದೇಶದ ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಗೂಂಡಾಗಳಿಗೆ ನಮಸ್ಕಾರ ಮಾಡುವ ಮೂಲಕ ನರೇಂದ್ರ ಮೋದಿಯವರು ಯಾವ ಸಂದೇಶ ಕೊಡಲು ಹೊರಟಿದ್ದಾರೆ? ಚುನಾವಣೆಯಲ್ಲಿ ಜಯಗಳಿಸಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.