ಮಂಗಳೂರು ನಗರಕ್ಕೆ ಅಸಮರ್ಪಕ ನೀರು ಪೂರೈಕೆ: ಪಾಲಿಕೆಗೆ ನಾಗರಿಕರ ಹಿಡಿಶಾಪ

Prasthutha|

ತುಂಬೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ತುಂಬಿದ್ದರೂ ಮಂಗಳೂರಿನ ಸಾಕಷ್ಟು ಪ್ರದೇಶದಲ್ಲಿ ನೀರಿಗೆ ಬರ

- Advertisement -


ಮಂಗಳೂರು: ಅತಿ ಹೆಚ್ಚು ಮಳೆ ಸುರಿಯುವ ಮಂಗಳೂರಿನಲ್ಲಿ ಕುಡಿಯುವ ನೀರಿಗೂ ಈಗ ತಾತ್ವಾರ ಉಂಟಾಗಿದೆ. ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಮಂಗಳೂರು ನಗರದ ಹಲವು ಪ್ರದೇಶಗಳ ಜನರು ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ನಗರದ ಎತ್ತರದ ಪ್ರದೇಶಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಈ ಬಗ್ಗೆ ಪಾಲಿಕೆಗೆ ನಿರಂತರ ದೂರುಗಳು ಬರುತ್ತಿವೆ. ನೀರು ಏರದ ಎತ್ತರದ ಜಾಗಗಳಿಗೆ ಟ್ಯಾಂಕರ್’ಗಳ ಮೂಲಕವೂ ನೀರು ಪೂರೈಕೆ ಆಗುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ ಚರಂಡಿ ನೀರು ಬಾವಿಯ ನೀರಿನೊಂದಿಗೆ ಬೆರೆತು ನಿಂತಿದೆ. ಬೆಂದೂರ್ ವೆಲ್, ಮೇರಿ ಹಿಲ್, ಬಂದರು ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

- Advertisement -


ಎತ್ತರ ಪ್ರದೇಶವಾದ ಪಂಜಿಮೊಗರು ಸ್ಥಿತಿ ಶೋಚನೀಯವಾಗಿದೆ. ವಿದ್ಯಾನಗರ, ಉರುಂದಡಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಇದರ ನಡುವೆ ಪಂಪ್ ಕೆಲಸ ಮಾಡುತ್ತಿಲ್ಲ. ವಾರದಲ್ಲಿ ಎರಡೆರಡು ಬಾರಿ ಪಂಪ್ ರಿಪೇರಿ ಎಂದು ಹೇಳುತ್ತಾರೆ ಎನ್ನುವುದು ನಾಗರಿಕರ ದೂರು.


ವಾಮಂಜೂರು, ಪಚ್ಚನಾಡಿ, ತಿರುವೈಲ್’ಗಳಲ್ಲಿ ಎರಡು ದಿನಕ್ಕೊಮ್ಮೆ ಒಂದು ಗಂಟೆ ಕಾಲ ಮಾತ್ರ ನೀರು ಬರುತ್ತದೆ. ಇಲ್ಲಿನ ಬಾವಿಗಳಿಗೆ ಪಚ್ಚನಾಡಿಯ ಕಸದ ಒಸರುಗಳು ಬಂದು ಸೇರಿರುವುದರಿಂದ ಬಾವಿಯ ನೀರು ಬಳಸುವಂತಿಲ್ಲ.
ಹಲವು ಅಪಾರ್ಟ್ ಮೆಂಟ್’ಗಳು ಕೂಡ ನೀರಿನ ಸಮಸ್ಯೆ ಎದುರಿಸುತ್ತಿವೆ. ಅವರೇ ಹಣ ಹಾಕಿ ಖಾಸಗಿಯವರಿಂದ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಪಾಂಡೇಶ್ವರ, ಮೇರಿ ಹಿಲ್ ಪ್ರದೇಶಗಳಲ್ಲಿ ವಾರಕ್ಕೆ ಏಳೆಂಟು ಟ್ಯಾಂಕರ್ ನೀರು ಬರುತ್ತದೆ.


ಕಾಟಿಪಳ್ಳ, ಕೃಷ್ಣಾಪುರ, ಸುರತ್ಕಲ್, ಕಾನ ನಿವಾಸಿಗಳು ಭಾರೀ ನೀರಿನ ಕೊರತೆ ಎದುರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ, ಟ್ಯಾಂಕ್ ಸೋರುವುದು, ನೀರಿನ ಕೊಳವೆ ಸಿಡಿತಗಳು ಜನರ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿವೆ.
ಕಣ್ಣೂರು, ಬಂದರು, ಮರಕಡ, ಕುಳಾಯಿ, ಬೈಕಂಪಾಡಿ, ಕುಂಜತ್ತಬೈಲ್, ಕದ್ರಿ ಪದವು, ಮಣ್ಣಗುಡ್ಡ, ದೇರೆಬೈಲ್, ಬೋಳೂರು, ಕಂಕನಾಡಿ, ಶಿವಬಾಗ್, ಜೆಪ್ಪು ಪ್ರದೇಶಗಳಲ್ಲಿ ನೀರು ಬರುತ್ತಿಲ್ಲ ಎನ್ನುವ ಗೊಣಗು ನಿತ್ಯದ್ದಾಗಿದೆ.


“ಎಲ್ಲಿ ನೀರಿನ ಕೊರತೆ ಇದೆಯೋ ಅಲ್ಲಿ ಟ್ಯಾಂಕರ್’ಗಳ ಮೂಲಕ ನೀರು ಪೂರೈಸುವಂತೆ ಸೂಚಿಸಲಾಗಿದೆ. ತುಂಬೆ ಅಣೆಕಟ್ಟೆಯಲ್ಲಿ 45 ದಿನ ಧಾರಾಳವಾಗಿ ಬಳಸಲು ನೀರು ಇದೆ. ನೀರಿನ ಮಟ್ಟ ಕಾಪಾಡಲು ಎಎಂಆರ್ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ” ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.



Join Whatsapp