ತ್ರಿಪುರದಲ್ಲಿ ಚುನಾವಣಾ ಬಳಿಕದ ಹಿಂಸಾಚಾರ ತನಿಖೆಗೆ ಬಂದ ಸಂಸದೀಯ ಸಮಿತಿಯ ಮೇಲೆ ಭೀಕರ ದಾಳಿ

Prasthutha|

ಅಗರ್ತಲಾ: ತ್ರಿಪುರದಲ್ಲಿ ಚುನಾವಣೆಯ ಬಳಿಕ ನಡೆದ ಹಿಂಸಾಚಾರದ ತನಿಖೆ ನಡೆಸಲು ತ್ರಿಪುರಾಕ್ಕೆ ಭೇಟಿ ನೀಡಿದ ಸಂಸದೀಯ ಸಮಿತಿಯ ಮೇಲೆ ದುಷ್ಕರ್ಮಿಗಳ ತಂಡ ಭೀಕರ ದಾಳಿ ನಡೆಸಿದೆ.
ಎರಡು ದಿನಗಳ ಭೇಟಿಗಾಗಿ ಈ ತಂಡ ತ್ರಿಪುರಾಕ್ಕೆ ಬಂದಿದೆ.

- Advertisement -


ಶುಕ್ರವಾರ ಸಂಜೆ ಬರುತ್ತಲೇ ಸಂಸದೀಯ ತಂಡದ ಮೇಲೆ ಬಿಸಲ್ಗಡದ ನೇಹಲ್ಚಂದ್ರ ನಗರ ಬಜಾರ್’ನಲ್ಲಿ ಹಲ್ಲೆ ನಡೆದಿರುವುದರಿಂದ ಸಂತ್ರಸ್ತರ ಮನೆಗಳ ಭೇಟಿ ಕಾರ್ಯಕ್ರಮಗಳನ್ನು ಸಂಸದೀಯ ಸಮಿತಿ ಅನಿವಾರ್ಯವಾಗಿ ರದ್ದು ಮಾಡಬೇಕಾಗಿದೆ ಎಂದು ಮಾಜಿ ಮಂತ್ರಿ ಮತ್ತು ತ್ರಿಪುರಾದ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಹೇಳಿದ್ದಾರೆ.
ಸಂಸದೀಯ ಸಮಿತಿಯು ಹಿಂಸಾಚಾರ ನಡೆದ ಸೆಪಾಹಿಜಲ ಜಿಲ್ಲೆಯ ಬಿಸಲ್ಗಡಕ್ಕೆ ಹೋದಾಗ ಬಿಜೆಪಿಯವರು ತಂಡದ ಮೇಲೆ ದಾಳಿ ಮಾಡಿದ್ದಲ್ಲದೆ ಮೂರು ವಾಹನಗಳಿಗೆ ಹಾನಿ ಉಂಟು ಮಾಡಿದ್ದಾರೆ.
“ಸಂಸದರು ಮತ್ತು ಜೊತೆಗಿದ್ದ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರುಗಳು ಕೂಡಲೇ ಬೇರೆ ವಾಹನಗಳಲ್ಲಿ ತೆರಳಿ ಭಾರೀ ದಾಳಿಯಿಂದ ಪಾರಾದರು” ಎಂದು ಸಿಪಿಎಂ ಹೇಳಿಕೆ ನೀಡಿದೆ.
ಬಿಸಲ್ಗಡದ ನೇಹಲ್ಚಂದ್ರ ನಗರ ಬಜಾರ್’ಗೆ ಸ್ಥಳೀಯ ಶಾಸಕರೊಂದಿಗೆ ಸಂಸದರ ತಂಡದವರು ಬಂದಾಗ ಘೋಷಣೆ ಕೂಗುತ್ತ ಒಂದು ಗುಂಪು ಅವರಿಗೆ ಮುತ್ತಿಗೆ ಹಾಕಿತು ಎಂದು ಪೊಲೀಸರು ಹೇಳಿದರು.
“ತಂಡದ ಜೊತೆಗೆ ಬಂದಿದ್ದ ಪೊಲೀಸರು ಭೇಟಿ ನೀಡಲು ಬಂದವರನ್ನು ಕೂಡಲೆ ಸುರಕ್ಷಿತವಾಗಿ ದೂರ ಕರೆದೊಯ್ದರು. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇದ್ದರು. ಯಾರಿಗೂ ಗಾಯವಾಗಿಲ್ಲ. ಎರಡ್ಮೂರು ವಾಹನಗಳಿಗೆ ಹಾನಿಯಾಗಿವೆ. ಒಬ್ಬರನ್ನು ಬಂಧಿಸಲಾಗಿದ್ದು, ಉಳಿದವರನ್ನೂ ಗುರುತಿಸಿ ಬಂಧಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.


ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಘಟನೆಯನ್ನು ಖಂಡಿಸಿದ್ದಾರೆ. “ತ್ರಿಪುರಾದ ಬಿಸಲ್ಗಡದಲ್ಲಿ ಬಿಜೆಪಿ ಗೂಂಡಾಗಳ ತಂಡವೊಂದು ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿದೆ. ತಂಡದ ಜೊತೆಗಿದ್ದ ಪೊಲೀಸರು ಏನೂ ಮಾಡುತ್ತಿಲ್ಲ. ನಾಳೆ ಅಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸುತ್ತದೆ. ಪ್ರಾಯೋಜಿತ ಹಿಂಸಾಚಾರಕ್ಕೆ ವಿಜಯೋತ್ಸವ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಂಸದೀಯ ಸಮಿತಿಯಲ್ಲಿ ನಾಲ್ವರು ಲೋಕ ಸಭೆಯ ಮತ್ತು ಮೂವರು ರಾಜ್ಯ ಸಭೆಯ ಸಂಸದರು ಇದ್ದರು. ಅವರು ಮೂರು ಗುಂಪುಗಳಾಗಿ ಪಶ್ಚಿಮ ತ್ರಿಪುರ, ಸೆಪಾಯಿಜಲ, ಗೋಮತಿ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದ ಪ್ರದೇಶಗಳಿಗೆ ಮೂರು ತಂಡಗಳಲ್ಲಿ ಭೇಟಿ ನೀಡುವವರಿದ್ದರು ಎಂದು ಕಾಂಗ್ರೆಸ್, ಸಿಪಿಎಂ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಸ್ಥಳೀಯ ಶಾಸಕರಾದ ಆರ್. ಆರ್. ನಟರಾಜ, ಎ. ಎ. ರಹೀಂ, ಅಬ್ದುಲ್ ಕಾಲಿಖ್, ಬಿಕಾಸ್ ರಂಜನ್ ಭಟ್ಟಾಚಾರ್ಯ, ವಿನಯ್ ವಿಶ್ವಂ, ಎಲಾರಂ ಕರೀಂ ಜೊತೆಯಲ್ಲಿದ್ದರು.



Join Whatsapp