ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದಿದ್ದ ಯುವತಿಯೊಬ್ಬಳು ಅಪಾರ್ಟ್ ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಿನ್ನೆ ಮಧ್ಯರಾತ್ರಿ ಕೋರಮಂಗಲದ 8ನೇ ಬ್ಲಾಕ್ನಲ್ಲಿ ನಡೆದಿದೆ.
ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ನಾಲ್ಕನೇ ಮಹಡಿಯಿಂದ ಬಿದ್ದು ಅರ್ಚನಾ ಧಿಮಾನ್ (28) ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್ ಪ್ರತಿಷ್ಠಿತ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು ನಗರದಲ್ಲಿನ ತನ್ನ ಸ್ನೇಹಿತ ಆದೇಶ್ ನನ್ನು ಭೇಟಿಯಾಗಲು ನಿನ್ನೆ ದುಬೈನಿಂದ ಬಂದಿದ್ದರು.
ಕೇರಳ ಮೂಲದ ಆದೇಶ್ ನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ 12 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ ನ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಅರ್ಚನಾ ಸಾವನ್ನಪ್ಪಿದ್ದಾರೆ.
ಕೆಲವು ವರ್ಷಗಳಿಂದ ಅರ್ಚನಾ ಹಾಗೂ ಆದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ನಗರಕ್ಕೆ ಗೆಳೆಯನನ್ನು ಭೇಟಿಯಾಗಲು ಬಂದಾಗ ಘಟನೆ ನಡೆದಿದೆ. ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್ ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ