ಜೈಪುರ: ಪುಲ್ವಾಮಾ ದಾಳಿಯಲ್ಲಿ ವಿಧವೆಯರಾದವರು ಕುಟುಂಬಕ್ಕೆ ಉದ್ಯೋಗ ನೀಡುವಂತೆ ಬೇಡಿಕೆಯಿಟ್ಟು ಜೈಪುರದಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳದಿಂದ ರಾಜಸ್ತಾನದ ಪೊಲೀಸರು, ಬಿಜೆಪಿ ನಾಯಕ ಕಿರೋಡಿಲಾಲ್ ಮೀನಾರನ್ನು ಬಂಧಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಮೀನಾ ವಿಧವೆಯರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಆಪಾದಿಸಿದ್ದಾರೆ.
2019ರ ಪುಲ್ವಾಮಾ ಉಗ್ರ ದಾಳಿಯಲ್ಲಿ ಕೊಲ್ಲಲ್ಪಟ್ಟ ಸಿಆರ್’ಪಿಎಫ್ ಸೈನಿಕರ ವಿಧವೆಯರು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಜೈಪುರ ನಿವಾಸದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರು. ಮುಂಜಾವ 3 ಗಂಟೆಯ ಹೊತ್ತಿಗೆ ಅವರೆಲ್ಲ ಅವರ ವಾಸದ ನೆಲೆಯ ಬಳಿಯ ಆಸ್ಪತ್ರೆಗಳಿಗೆ ಜಾಗ ಬದಲಿಸಿದ್ದಾರೆ.
ಇದು ವಿಧವೆಯರಿಗೆ ಮಾಡಿದ ಅವಮಾನ, ಅವರ ಕುಟುಂಬಗಳಿಗೆ ನೀಡಿದ ಆಶ್ವಾಸನೆಗಳನ್ನು ನೆರವೇರಿಸಿಲ್ಲ ಎಂದು ಬಿಜೆಪಿ ಆಪಾದಿಸಿದೆ.
“ನಾನು ನನ್ನ ಬೆಂಬಲಿಗರೊಂದಿಗೆ ಸಮೋದ್ ಬಾಲಾಜಿಯವರನ್ನು ಭೇಟಿಯಾಗುತ್ತೇನೆ. ಆದರೆ ಸಮೋದ್ ಪೊಲೀಸರು ನನ್ನನ್ನು ತಡೆದರು ಮತ್ತು ಎತ್ತಿ ವಾಹನಕ್ಕೆ ಹಾಕಿಕೊಂಡರು. ವೀರ ವನಿತೆಯರ ಬೆಂಬಲಕ್ಕೆ ನಿಲ್ಲುವುದು ಅಪರಾಧವೇನು?” ಎಂದು ಮೀನಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಪೊಲೀಸರ ಜೊತೆಗಿನ ವಾಗ್ವಾದದ ವೀಡಿಯೋವನ್ನೂ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 28ರಿಂದ ಪ್ರತಿಭಟನೆ ನಡೆಸುತ್ತಿರುವ ಪುಲ್ವಾಮಾ ವಿಧವೆಯರು ಕಳೆದ 6 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಪರಿಹಾರವಾಗಿ ಮಕ್ಕಳಿಗೆ ಮಾತ್ರ ಎಂಬ ನಿಯಮ ಬದಲಿಸಿ ಕುಟುಂಬದ ಬೇರೆಯವರಿಗೂ ಉದ್ಯೋಗ ನೀಡುವಂತೆ ಒತ್ತಾಯಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರವರ ಊರುಗಳಲ್ಲಿ ಬಲಿದಾನಿಗಳ ರಸ್ತೆ ರಚನೆ ಮತ್ತು ಮೂರ್ತಿ ಸ್ಥಾಪನೆಯೂ ಅವರ ಬೇಡಿಕೆಗಳಲ್ಲಿ ಸೇರಿದೆ.
ಬಲಿಯಾದ ಸೈನಿಕರ ಸಂತಾನದ ಕೈಗಳಿಂದ ಉದ್ಯೋಗಗಳನ್ನು ಕಸಿಯಲು ಬೇರೆಯವರು ನಡೆಸಿರುವ ಸಂಚಿನಂತೆ ಇದು ಕಾಣಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಹೇಳಿದ್ದಾರೆ. ಕೊಲ್ಲಲ್ಪಟ್ಟ ಕೆಲವು ಸೈನಿಕರ ಪ್ರತಿಮೆಗೆ ಒತ್ತಾಯಿಸುವುದು ಕೂಡ ಇತರ ಬಲಿದಾನಿ ಸೈನಿಕರಿಗೆ ದ್ರೋಹ ಬಗೆಯುವದಾಗಿದೆ ಎಂದೂ ಗೆಹ್ಲೋತ್ ಹೇಳಿದರು.