ಮಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮಂಗಳೂರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ, ನಮ್ಮ ಸರಕಾರ ಇದ್ದಾಗ ಅಡುಗೆ ಅನಿಲ ಸಿಲಿಂಡರ್’ಗೆ ರೂ. 400ಗೆ ಸಿಗುತ್ತಿತ್ತು. ಮೋದಿಯವರ ಕಾಲದಲ್ಲಿ ರೂ. 1,100 ಕೊಡಬೇಕಾಗಿದೆ. ಇದು ನಾಚಿಗೆಗೆಟ್ಟ ಸರಕಾರ ಎಂದು ಟೀಕಿಸಿದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಮೋದಿಯವರು ಕಾಂಗ್ರೆಸ್ ಸರ್ಕಾರ ಇದ್ದಾಗ ಅಡುಗೆ ಸಿಲಿಂಡರ್ ನೋಡಿ ಮತ ಹಾಕಿ ಎಂದರು. ಇಂದು ಯಾವ ಅಡುಗೆ ಸಿಲಿಂಡರ್ ನೋಡಬೇಕು ಎಂದು ಕುಟುಕಿದರು.
ಎಂ. ಜಿ. ಹೆಗಡೆ, ಶಿವಪ್ರಸಾದ್ ಪಾಣಾಜೆ ಮಾತನಾಡಿ, ಇಂದು ನಿರುದ್ಯೋಗದ ಬಗ್ಗೆ, ಶಿಕ್ಷಣ ಮೋಸದ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಈ ಸರಕಾರಗಳು ಅವನ್ನೆಲ್ಲ ಮರೆಸಿ ಕೋಮುವಾದ ಮತ್ತು ದ್ವೇಷದ ರಾಜಕೀಯ ಮಾಡುತ್ತಿದೆ ಎಂದರು.
ಮುಹಮ್ಮದ್ ನಲಪಾಡ್ ಮಾತನಾಡಿ, ಮಕ್ಕಳಿಗೆ ಹಾಲು ಕುಡಿಸಲಿಕ್ಕೂ ಜಿಎಸ್’ಟಿ ಕಟ್ಟಬೇಕು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಿಲಿಂಡರ್ ಬೆಲೆ ಏರಿಕೆಯಾದಾಗ ಸಿಲಿಂಡರ್ ಹೊತ್ತು ಸ್ಮೃತಿ ರಸ್ತೆಗೆ ಬಂದಿದ್ದರು. ಈಗ ಎಲ್ಲಿ ಅಡಗಿದ್ದಾರೆ. ಆದಾಯ ದುಪ್ಪಟ್ಟು ಆಗುವುದು ಹೋಗಲಿ, ಜನರ ಆದಾಯವೇ ಎಕ್ಕುಟ್ಟಿ ಹೋಗಿದೆ. ಬೆಲೆಯೇರಿಕೆಯಿಂದ ಜೀವನ ನಿರ್ವಹಣೆಯೇ ಜನರಿಗೆ ಕಷ್ಟವಾಗಿದೆ. ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ನಲಪಾಡ್ ಹೇಳಿದರು.